ರಂಭಾಪುರಿ ಶ್ರೀಗಳು ಶ್ರೀ ಚನ್ನಬಸವೇಶ್ವರಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಸಿ.ಎಚ್. ಶ್ರೀನಿವಾಸ್, ಮಾಡಾಳು ಮಲ್ಲಿಕಾರ್ಜುನ, ಎಂ.ಆರ್.ಮೂರ್ತಿ, ರುದ್ರಪ್ಪ, ಎಂ. ಲೋಕಪ್ಪ ಮಸಣಿಕೆರೆ, ಗೌಡರ ಹಾಲಪ್ಪ ಇದ್ದರು. Inauguration
ದಾವಣಗೆರೆ

ಭಾರತೀಯ ಸಂಸ್ಕೃತಿಯಲ್ಲಿ ದೇಗುಲಗಳಿಗೆ ವಿಶೇಷ ಸ್ಥಾನ

ರಂಭಾಪುರಿ ಶ್ರೀ ಅನಿಸಿಕೆ

ಚನ್ನಗಿರಿ: ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ವಿಶೇಷ ಸ್ಥಾನವಿದ್ದು, ಸಂಸ್ಕಾರ, ಸಂರಕ್ಷಣೆಯ ತಾಣವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಶ್ರೀ ಚನ್ನಬಸವೇಶ್ವರಸ್ವಾಮಿ, ಶ್ರೀ ಆಂಜನೇಯ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ, ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ದೇವಾಲಯಗಳು ಮೌಲ್ಯಗಳ ಸಂವರ್ಧನೆಯ ಕೇಂದ್ರಗಳಾಗಿವೆ ಎಂದರು.

ದೇವಾಲಯಗಳು ಕೇವಲ ಕಲ್ಲು ಮಣ್ಣಿನಿಂದ ನಿರ್ಮಿಸಿದ ಕಟ್ಟಡವಲ್ಲ, ಭಕ್ತಿ ಭಾವಗಳ ಸಂಗಮಸ್ಥಾನ, ದೇವಸ್ಥಾನದಲ್ಲಿ ಬೆಳಗುವ ದೀಪ ಗರ್ಭಗುಡಿಯಲ್ಲಿನ ಕತ್ತಲು ದೂರ ಮಾಡುವುದಲ್ಲ, ಮನುಷ್ಯರಲ್ಲಿ ಅಡಗಿರುವ ಅಹಂಕಾರ, ಅಜ್ಞಾನ, ಅಂದಕಾರವನ್ನು ದೂರ ಮಾಡುತ್ತದೆ. ದೇವಾಲಯ ಭಕ್ತಿ ಹೆಚ್ಚಿಸಿ ಜ್ಞಾನ ಮೂಡಿಸುವ ಸತ್ಸಂಗ ಸಂಸ್ಕಾರ ನೀಡುವ ಪವಿತ್ರ ಕೇಂದ್ರ ಎಂದರು.

ಗ್ರಾಮ ಚಿಕ್ಕದಾದರೂ ಸುಂದರ ದೇವಾಲಯ ನಿರ್ಮಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ರಂಭಾಪುರಿ ಶ್ರೀಗಳು, ಹೃದಯದ ಅಂದಕಾರ ಮತ್ತು ಅಹಂಕಾರವನ್ನು ದೇಗಲುಗಳು ತೊಡೆದು ಹಾಕುತ್ತವೆ ಎಂದರು. ಗಣ್ಯರು ಮತ್ತು ದಾನಿಗಳಿಗೆ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಆಶೀರ್ವದಿಸಿದರು. ಎಂ.ಆರ್. ಮೂರ್ತಿ ಅತಿಥಿಯಾಗಿ ಭಾಗವಹಿಸಿದ್ದರು. ಸಮಿತಿಯ ಮುಖ್ಯಸ್ಥ ರುದ್ರಪ್ಪ ಎಂ., ಲೋಕಪ್ಪ ಮಸಣಿಕೆರೆ, ಗೌಡರ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಚನ್ನಬಸವೇಶ್ವರಸ್ವಾಮಿ, ಶ್ರೀ ಆಂಜನೇಯ ಸ್ವಾಮಿಯ ಪ್ರಾಣಪ್ರತಿಷ್ಠಾಪನೆ ಮತ್ತು ಗೋಪುರ ಕಲಶಾರೋಹಣವನ್ನು ರಂಭಾಪುರಿ ಜಗದ್ಗುರುಗಳು ನೆರವೇರಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ನ್ಯಾಯವಾದಿ ರಂಗನಾಥ ಪಟೇಲ್ ಸ್ವಾಗತಿಸಿದರು. ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ ವಂದಿಸಿದರು.

ದೇಗುಲಗಳು ಕಾರಣ

ಶಾಂತಿ-ಸದ್ಗುಗಣಗಳ ಸಂವರ್ಧನೆಗೆ ದೇವಸ್ಥಾನಗಳು ಕಾರಣ ಎಂದು ತಾವರಕೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಭಗವಂತ ನಮಗೆ ಏನೆಲ್ಲ ಕೊಟ್ಟಿದ್ದಾನೆ. ಅವನನ್ನು ಸ್ಮರಿಸಲು ದಿನದ 24 ಗಂಟೆಗಳಲ್ಲಿ ಕೆಲ ಸಮಯವನ್ನಾದರೂ ಮೀಸಲು ಇಡದಿದ್ದರೆ ಜೀವನ ನಿರರ್ಥಕ ಎಂದು ಹೇಳಿದರು.