ದಾವಣಗೆರೆಯ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರು ಉತ್ತರ ಬಾಗಿಲ ಮೂಲಕ ಸ್ವಾಮಿಯ ದರ್ಶನ ಪಡೆದರು.  
ದಾವಣಗೆರೆ

ಶ್ರೀನಿವಾಸನ ದರ್ಶನಕ್ಕೆ ಭಕ್ತಸಾಗರ

ಪ್ರಮುಖ ಮುಖ್ಯಾಂಶಗಳು

  • ವೈಕುಂಠ ಏಕಾದಶಿಯ ಸಂಭ್ರಮ
  • ಕಳೆಗಟ್ಟಿದ ದೇಗುಲಗಳು
  • ಎಲ್ಲೆಲ್ಲೂ ಗೋವಿಂದ ನಾಮಸ್ಮರಣೆ
ದಾವಣಗೆರೆ : ಭಗವಂತನ ದರ್ಶನ ಪಡೆಯಲು ಅವರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದರು. ಗೋವಿಂದನನ್ನು ಒಮ್ಮೆ ಕಣ್ತುಂಬಿಕೊಂಡರೆ ಸಾಕು ಎಂಬ ಭಾವನೆಯಿಂದ ಕಾದಿದ್ದರು. ಶ್ರೀನಿವಾಸನ ಅನುಗ್ರಹ ಬಯಸಿ ಭಕ್ತಿಪರವಶರಾದರು. ಸಂಕಟಗಳನ್ನು ಪರಿಹರಿಸುವಂತೆ ವೆಂಕಟೇಶ್ವರನನ್ನು ಪ್ರಾರ್ಥಿಸಿದರು.
ವೈಕುಂಠ ಏಕಾದಶಿ ಪ್ರಯುಕ್ತ ಜಿಲ್ಲೆಯ ದೇವಸ್ಥಾನಗಳಲ್ಲಿ ಮಂಗಳವಾರ ಕಂಡುಬಂದ ದೃಶ್ಯವಿದು. ದೇಗುಲಗಳು ಬಗೆ ಬಗೆಯ ಹೂವು, ವಿದ್ಯುದ್ದೀಪಗಳ ಅಲಂಕಾರದಿಂದ ಕಳೆಗಟ್ಟಿದ್ದವು. ‘ಗೋವಿಂದ.. ಗೋವಿಂದ...’ ನಾಮಸ್ಮರಣೆ ತುಂಬಿತ್ತು. ಬೆಳಗಿನ ಜಾವದಿಂದಲೇ ದೇಗುಲಗಳಲ್ಲಿ ವಿಶೇಷ ಪೂಜೆಗಳು ಆರಂಭವಾದವು. ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ವಯೋ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಒಟ್ಟಾಗಿ ಬಂದರು. ಸಾಲಿನಲ್ಲಿ ನಿಂತಾಗಲೂ ಶ್ರೀನಿವಾಸನ ಧ್ಯಾನದಲ್ಲೇ ಮುಳುಗಿದ್ದರು. ಹಲವು ಸೇವೆಗಳನ್ನು ಮಾಡಿಸಿ ಭಕ್ತಿಯನ್ನು ಸಮರ್ಪಿಸಿದರು. ಕೆಲವರು ದೇವರ ನಾಮಗಳನ್ನು ಹಾಡುತ್ತಲೇ ಮುಂದೆ ಸಾಗಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜದ ವಿವಿಧ ವರ್ಗಗಳ ಗಣ್ಯರು ಭಗವಂತನ ದರ್ಶನ ಪಡೆದರು.
ನಗರದ ಎಂಸಿಸಿ ‘ಬಿ’ ಬ್ಲಾಕ್‌ನ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭಕ್ತ ಸಾಗರ ಹರಿದು ಬಂದಿತು. ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಭಕ್ತರ ಸಾಲು ಬೆಳೆಯುತ್ತಲೇ ಇತ್ತು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಲ ಭಕ್ತರು ವೈಯಕ್ತಿಕವಾಗಿ ಪ್ರಸಾದ ಸೇವೆ ಕೈಗೊಂಡರು.

ಉತ್ತರ ದ್ವಾರ ದರ್ಶನ

ವೆಂಕಟೇಶ್ವರ ಸ್ವಾಮಿಗೆ ಬಣ್ಣ ಬಣ್ಣದ ಹೂವುಗಳು ಮತ್ತು ಸರ್ವಾಭರಣಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಬೆಳಗಿನ ಜಾವ 5 ಗಂಟೆಯಿಂದಲೇ ವಿಶೇಷ ಪೂಜೆ ಆರಂಭವಾಯಿತು. ನಂತರ ಉತ್ತರ ಬಾಗಿಲು ಪೂಜೆ ನೆರವೇರಿಸಲಾಯಿತು. ಬೆಳಗ್ಗೆಯಿಂದ ರಾತ್ರಿ 10 ರ ವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ದೇವಸ್ಥಾನದ ಉತ್ತರ ಬಾಗಿಲಿನಲ್ಲಿ ಗರುಡ ವಾಹನನಾದ ಶ್ರೀಮನ್ನಾರಾಯಣನ ದರ್ಶನ ಮಾಡಿ ಭಕ್ತರು ಧನ್ಯತಾ ಭಾವ ಅನುಭವಿಸಿದರು.

ಸ್ವಾಮಿಗೆ ಲಕ್ಷ ತುಳಸಿ ಅರ್ಚನೆ

ವೈಕುಂಠ ಏಕಾದಶಿ ಪ್ರಯುಕ್ತ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ತ್ರಿಕೂಟಾಚಲ ದೇವಸ್ಥಾನದಲ್ಲಿ ಲಕ್ಷ್ಮಿ ವೆಂಕಟೇಶ್ವರ ಮೂರ್ತಿಗೆ ಒಂದು ಲಕ್ಷದ ಒಂದು ತುಳಸಿ ಅರ್ಪಣೆ ಮಾಡಲಾಯಿತು.
ಇಷ್ಟಾರ್ಥ ಸಿದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ತುಳಸಿ ಅರ್ಚನೆ ನಡೆಯಿತು. ಐದು ಜನ ಅರ್ಚಕರಿಂದ ನಿರಂತರ ಆರು ಗಂಟೆಗೂ ಅಧಿಕ ಕಾಲ ತುಳಸಿ ಅರ್ಚನೆ ಮಾಡಲಾಯಿತು. ದೇವಸ್ಥಾನದ ಧರ್ಮದರ್ಶಿ ತಿಪ್ಪಣ್ಣ ಅವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಕೂಡಲಿ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬೆಳ್ಳಗೆ 4 ಗಂಟೆಯಿಂದ, ಜಲಾಭೀಷಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ದಾವಣಗೆರೆ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.

ಅಣಜಿ ಗೊಲ್ಲರಹಳ್ಳಿ

ದಾವಣಗೆರೆ ತಾಲೂಕು ಅಣಜಿ ಗೊಲ್ಲರಹಳ್ಳಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಆಚರಣೆ ವೈಭವದಿಂದ ನೆರವೇರಿತು.
ಸ್ಥಳೀಯರಲ್ಲದೇ ಸುತ್ತಲಿನ ಗ್ರಾಮಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ವೈಕುಂಠ ಬಾಗಿಲಿನಿಂದ ದರ್ಶನ ಮಾಡಿದ್ದು ವಿಶೇಷವಾಗಿತ್ತು. ಬಿ.ಟಿ. ಸಿದ್ದಪ್ಪ, ಬಿ.ಎಸ್. ಶ್ಯಾಮ್ ಇನ್ನಿತರ ಮುಖಂಡರು ಈ ಸಂದರ್ಭಕ್ಕೆ ಸಾಕ್ಷಿಯಾದರು. ಭಕ್ತರಿಗೆ ಲಡ್ಡು ಪ್ರಸಾದವನ್ನು ನೀಡಲಾಯಿತು.