ಸಂತೃಪ್ತಿ ಸಂಸ್ಥೆಯ ಅಂಧರ ಕುಟುಂಬ.  
ದಾವಣಗೆರೆ

ಅಂಧ ಕಲಾವಿದರ ‘ಸಂತೃಪ್ತಿ’ ಕುಟುಂಬ!

ಪ್ರಮುಖ ಮುಖ್ಯಾಂಶಗಳು

  • ದೃಷ್ಟಿಹೀನರ ಓದಿಗೆ ಆರ್ಕೆಸ್ಟ್ರಾವೇ ದಾರಿದೀಪ
  • ಹಲವರಿಗೆ ವಿವಿಧ ಕರಕುಶಲ ತರಬೇತಿ
  • ಹೊನ್ನಾಳಿಯಲ್ಲೊಂದು ವಿಶಿಷ್ಟ ಸೇವಾ ಸಂಸ್ಥೆ
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲೊಂದು ಅಂಧರ ವಿಶಿಷ್ಟ ಕುಟುಂಬವಿದೆ. ಅವರ‌್ಯಾರೂ ಒಡಹುಟ್ಟಿದವರಲ್ಲ! ದೂರದೂರಿನಿಂದ ಬಂದು ಒಟ್ಟಿಗೇ ಬದುಕು ಕಟ್ಟಿಕೊಂಡವರು. ಇರುವ 25 ಮಂದಿಯಲ್ಲಿ 12 ಜನ ಸಂಗೀತ ಕಲಾವಿದರಿದ್ದಾರೆ. ಊರೂರು ತಿರುಗಿ ಆರ್ಕೆಸ್ಟ್ರಾ ಮಾಡಿ ಅದರ ಆದಾಯದಿಂದಲೇ ಅಂಧ ವಿದ್ಯಾರ್ಥಿಗಳನ್ನು ಜತೆಯಲ್ಲೇ ಇರಿಸಿಕೊಂಡು ಓದಿಸುತ್ತಲೂ ಇದ್ದಾರೆ!
ಸರ್ಕಾರದ ಕಿಂಚಿತ್ತೂ ನೆರವಿಲ್ಲ. ಮೊದಲೆಲ್ಲ ವಾಸವಿದ್ದ ಮನೆಗೆ ಬಾಡಿಗೆ ಹಣ ತೆರಬೇಕಿತ್ತು. ಶಾಸಕ ಡಿ.ಜಿ.ಶಾಂತನಗೌಡ ಅವರು ದುರಸ್ತಿ ಮಾಡಿಸಿಕೊಟ್ಟ, ಟಿಬಿ ವೃತ್ತದ ಹಳೆಯ ಪುಟ್ಟ ಮನೆಯೇ ಇವರಿಗೆ ಆಸರೆ. ನಾಲ್ಕು ಕೋಣೆಯಲ್ಲಿ ಒಂದು ಕಚೇರಿ, ಎರಡರಲ್ಲಿ ಪುರುಷರು, ಮಹಿಳೆಯರು ಪ್ರತ್ಯೇಕ ವಾಸವಿದ್ದಾರೆ. ಮತ್ತೊಂದು ಕೊಠಡಿ ಅಡುಗೆಗೆ ಮೀಸಲು.
ದಾವಣಗೆರೆ, ಚಿತ್ರದುರ್ಗ, ಉಡುಪಿ, ವಿಜಯನಗರ, ಧಾರವಾಡ, ಬಾಗಲಕೋಟೆ, ಕೋಲಾರ, ಶಿವಮೊಗ್ಗದಿಂದ ಬಂದವರೂ ಇಲ್ಲಿ ಜತೆಗಾರರು. ಸಂತೃಪ್ತಿ ಅಂಧರ ಸೇವಾ ಸಂಸ್ಥೆ ಎಂಬ ಹೆಸರುಳ್ಳ ಈ ಗುಂಪಿಗೆ ದಶಮಾನೋತ್ಸವವೇ ಕಳೆದಿವೆ. ಜನರಿಂದ ನಿರೀಕ್ಷಿತ ಸಹಕಾರ ಸಿಗದಿದ್ದರೂ ಇವರ ಆಶಯ, ಆಸೆಗಳು ಮತ್ತಷ್ಟು ಸಂಕಲನಗೊಂಡಿವೆ!
ಎಲ್ಲೆಡೆ ಅಂಧರಿಗೆ 10ನೇ ತರಗತಿವರೆಗೆ ವ್ಯಾಸಂಗಕ್ಕೆ ಅವಕಾಶವಿದೆ. ಆನಂತರದ ಓದಿನಿಂದ ವಂಚಿತರಾಗುವುದನ್ನು ತಪ್ಪಿಸಲು ‘ಸಂತೃಪ್ತಿ’ ದಾರಿ ಮಾಡಿಕೊಟ್ಟಿದೆ. ಅಂಥವರಿಗೆ ಆರ್ಕೆಸ್ಟ್ರಾವೇ ಬೆನ್ನೆಲುಬು. ಇಲ್ಲಿದ್ದು ಇದುವರೆಗೆ ಓದಿ ಮರಳಿ ಗೂಡು ಸೇರಿಕೊಂಡ 16 ವಿದ್ಯಾರ್ಥಿಗಳ ಪೈಕಿ ಆರು ಮಂದಿ ವಿವಿಧೆಡೆ ಕೆಲಸ ಗಿಟ್ಟಿಸಿದ್ದಾರೆ. ಈಗ 8 ಮಂದಿ ಪಿಯು, ಪದವಿ ಓದುತ್ತಿದ್ದಾರೆ. ವಯೋಮಾನ ಮೀರಿದ ಐವರಿಗೆ ಇಲ್ಲಿಯೇ ಬ್ರೈಲ್ ಲಿಪಿ ಕಲಿಸುತ್ತ ಎಸ್ಸೆಸ್ಸೆಲ್ಸಿ ಕಟ್ಟಿಸಲಾಗಿದೆ!
‘ನಮ್ಮಲ್ಲಿ ಹೆಚ್ಚಿನವರು ಪೂರ್ಣ ಅಂಧರು. ನಾಲ್ವರು ಶೇ.70ರಷ್ಟು ಅಂಧತ್ವ ಇದ್ದವರಿದ್ದಾರೆ. ಓದಿನ ಜತೆಗೆ ಮೇಣದಬತ್ತಿ, ಪಿನಾಯಿಲ್ ತಯಾರಿ, ಬ್ಯಾಗ್ ಹೆಣೆಯುವ ತರಬೇತಿ ನೀಡಲಾಗುತ್ತಿದೆ. ಆರು ತಿಂಗಳಿಂದ ಅಡುಗೆಯವರನ್ನು ನೇಮಿಸಿ ತಿಂಗಳಿಗೆ 6500 ರೂ. ಸಂಬಳ ನೀಡುತ್ತಿದ್ದೇವೆ’ ಎಂದರು ಸಂಸ್ಥೆಯ ಕಾರ್ಯದರ್ಶಿ ವಿ. ಕಲ್ಲೇಶ್.
ಕಣ್ಣಿಲ್ಲದ ಕಾರಣಕ್ಕೆ ಓದಿನಿಂದ ಮೂಲೆಗುಂಪು ಮಾಡುವವರೇ ಹೆಚ್ಚು. ಇದನ್ನು ತಪ್ಪಿಸಲು ಅಂಧರಿಗೂ ಓದುವ ಅವಕಾಶ ಮಾಡಿಕೊಡುತ್ತಿದ್ದೇವೆ. ಕೆಲವರು ಪಾಲಕರು ಮಕ್ಕಳನ್ನು ಇಲ್ಲಿಗೆ ತಂದುಬಿಡುತ್ತಾರೆ. ಹೆಚ್ಚು ಓದಿ ಇಲ್ಲಿಂದ ತೆರಳಿದವರು ಒಂದು ಹೊತ್ತಿನ ಊಟಕ್ಕೆ ನೆರವು ನೀಡಿದ್ದಾರೆ. ಅವರಿಗೆ ಯಾವುದೇ ಒತ್ತಡ ಹಾಕುವುದಿಲ್ಲ ಎನ್ನುತ್ತಾರೆೆ ನಿವಾಸಿಗಳು.
ಮೊದಲೆಲ್ಲ ಗಣೇಶೋತ್ಸವ, ರಾಜ್ಯೋತ್ಸವ ಸಂದರ್ಭದಲ್ಲಿ ನಮಗೆ ಬೇಡಿಕೆ ಬರುತ್ತಿತ್ತು. ತಿಂಗಳಿಗೆ 15-20 ಕಾರ್ಯಕ್ರಮ ಸಿಗುತ್ತಿದ್ದವು. ಒಂದು ಕಾರ್ಯಕ್ರಮಕ್ಕೆ ಗರಿಷ್ಠ 10 ಸಾವಿರ ರೂ. ಆದಾಯ ಸಿಗುತ್ತಿತ್ತು. ಈಗ ಕರೋಕೆ ಹಾಡುಗಾರರು ಹೆಚ್ಚಿದ್ದಾರೆ. ಡಿಜೆ ಹಾಗೂ ನಮಗಿಂತಲೂ ಹೆಚ್ಚು ಸಬಲರಾದ ಆರ್ಕೆಸ್ಟ್ರಾ ತಂಡಗಳಿಗೇ ಆಫರ್ ಸಿಗುತ್ತಿದೆ.
ಈ ಹಿಂದೆ ಆರ್ಕೆಸ್ಟ್ರಾದ ಸಂಪಾದನೆಯಿಂದಲೇ ಸಂಗೀತದ ಪರಿಕರಗಳನ್ನು ಖರೀದಿಸಿದ್ದೇವೆ. ಈಗ ನಾವೇ ಊರೂರು ತಿರುಗಿ, ಹಾಡು ಹೇಳಿ ಪ್ರಚಾರ ಕಾರ್ಯ ಮಾಡುತ್ತಿದ್ದೇವೆ. ಮೂರು ತಾಸು ಹಾಡಿದರೂ ಸಿಗುವ ಕನಿಷ್ಠ 3-4 ಸಾವಿರ ರೂ.ನಲ್ಲಿ ವಾಹನದ ಬಾಡಿಗೆ, ಊಟ ಇತರೆ ವೆಚ್ಚ ನಿಭಾಯಿಸಬೇಕು. ಕೆಲವೊಮ್ಮೆ ದಾನಿಗಳೇ ನೆರವಾಗುತ್ತಾರೆ ಎನ್ನುತ್ತಾರೆ ಕಲಾವಿದರು.
ದೇವರು ನಮಗೆ ಕೊಟ್ಟ ಜೀವನದಲ್ಲೇ ನಾವು ಸಂತೃಪ್ತಿಯ ಜೀವನ ನಡೆಸಬೇಕು ಸಾರ್. ಹೀಗಾಗಿ ಈ ಸಂಸ್ಥೆಗೆ ಸಂತೃಪ್ತಿ ಎಂಬ ಹೆಸರಿಟ್ಟೆವು ಎಂದೆನ್ನುವ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ. ಅಣ್ಣಪ್ಪ, ಎಸ್ಸೆಸ್ಸೆಲ್ಸಿ ನಂತರದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಓದಲು ಸರ್ಕಾರದ ನೆರವು ಬೇಕು. ನಮ್ಮ ಸಂಸ್ಥೆಯಲ್ಲಿ ಕಂಪ್ಯೂಟರ್ ಲ್ಯಾಬ್ ಆಗಬೇಕಿದೆ ಎಂದು ಆಸೆ ತೋಡಿಕೊಳ್ಳುತ್ತಾರೆ.

ಅಂಧರಲ್ಲೂ ಸಾಮರ್ಥ್ಯವಿದೆ, ಬೆಂಗಳೂರಿನಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಸ್ಥಳೀಯವಾಗಿ ಈ ಕೆಲಸ ನಡೆಯುತ್ತಿಲ್ಲ. ಶಿವಮೊಗ್ಗದಲ್ಲಿ ಕೆಲ ವರ್ಷದ ಹಿಂದೆ ದೊಡ್ಡ ಜಾಥಾ ಮಾಡಿ ಸರ್ಕಾರದ ಗಮನ ಸೆಳೆದಿದ್ದೆವು. ಆದರೆ ಫಲ ಸಿಕ್ಕಿಲ್ಲ.