ಬಸವಾಪಟ್ಟಣ: ರೈತರಿಗೆ ನೂರಾರು ಸಮಸ್ಯೆಗಳಿದ್ದು, ಪರಿಹರಿಸಿಕೊಳ್ಳಲು ಸಂಘಟಿತ ಹೋರಾಟ ಅನಿವಾರ್ಯ ವಾಗಿದೆ. ರೈತರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿ ವಿ. ಪಟೇಲ್ ಹೇಳಿದರು.
ಭದ್ರಾ ಮತ್ತು ಸೂಳೆಕೆರೆ ನೀರಿಗಾಗಿ ಯಶಸ್ವಿ ಹೋರಾಟದ ನೇತೃತ್ವ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರರ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ಹಾಗೂ ಹೋರಾಟದ ಸಂದರ್ಭದಲ್ಲಿ ಸಹಕರಿಸಿದ ನೀರಾವರಿ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕಾರಿಗನೂರಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಸ್ಪರ ಸಹಕಾರದಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿ.ಸಿ. ಮಂಜುನಾಥ್ ಮಾತನಾಡಿ, ಕಾರಿಗನೂರು ಗ್ರಾಮದ ಇತಿಹಾಸವೇ ಹೋರಾಟದ ಹಿನ್ನೆಲೆಯನ್ನು ಹೊಂದಿದೆ. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಸಮಾಜವಾದಿ ಚಳವಳಿಯ ಮೂಲಕ ರಾಜ್ಯದ ಗಮನ ಸೆಳೆದಿದ್ದರೆ, ಇಂದು ತೇಜಸ್ವಿ ವಿ. ಪಟೇಲ್ ಅವರು ಹೋರಾಟ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ನೀರಾವರಿ ಇಲಾಖೆಯ ಎಇಇ ರಮೇಶ್ ಮಾತನಾಡಿ,
ನೀರಿನ ಸಮರ್ಪಕ ಬಳಕೆಗಾಗಿ ರೈತರು ಮುಂದೆಯೂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಜಿಪಂ ಮಾಜಿ ಸದಸ್ಯೆ ಲತಾ ತೇಜಸ್ವಿ ಪಟೇಲ್, ಸಂತೇಬೆನ್ನೂರು ಸಿಪಿಐ ಮಲ್ಲಮ್ಮ ಚೌಬೆ, ನೀರಾವರಿ ಇಲಾಖೆಯ ಇಂಜಿನಿಯರ್ ತಿಪ್ಪೇಸ್ವಾಮಿ, ಕೊಂಪೇರ ಬಸವರಾಜಪ್ಪ, ಬೆಂಡೆಕಾಯಿ ಸತೀಶ್, ವೀರೇಶ್ ಮುತ್ತಯ್ಯ ಇತರರಿದ್ದರು.