ಚನ್ನಗಿರಿ: ಮಳೆಯ ಕೃಪೆಗಾಗಿ ಹಿರೇಉಡ ಗ್ರಾಮಸ್ಥರು ಮಂಗಳವಾರ ಶ್ರೀ ಬಸವೇಶ್ವರ ದೇವರನ್ನು ಪಲ್ಲಕ್ಕಿ ಮೂಲಕ ಸೂಳೆಕೆರೆ ಸಿದ್ದಪ್ಪನ ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ಹಿರೇಉಡ ಗ್ರಾಮದಲ್ಲಿ ಬಸವೇಶ್ವರ ಮತ್ತು ಸಿದ್ದಪ್ಪ ದೇವರಿಗೆ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಗ್ರಾಮಸ್ಥರು, ರೈತರು ಮತ್ತು ಭಕ್ತರು ಪಾದಯಾತ್ರೆ ಹೊರಟರು. ಸೂಳೆಕೆರೆ ಸಿದ್ದಪ್ಪ ದೇವಸ್ಥಾನದಲ್ಲಿ ಕ್ಕೆ ಆಗಮಿಸಿ, ವರುಣದೇವ ಕೃಪೆ ತೋರಿ ರೈತರನ್ನು ಕಾಪಾಡಲಿ ಎಂದು ವಿಶೇಷ ಅಭಿಷೇಕ ಹಾಗೂ ಪೂಜಾದಿಗಳನ್ನು ನೆರವೇರಿಸಿದರು.
ಚನ್ನಗಿರಿ ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿದ್ದು, ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರು ಹಾಗೂ ಅಡಿಕೆ ತೋಟಗಳಿಗೆ ನೀರಿಲ್ಲ. ಸಮಯಕ್ಕೆ ಸರಿಯಾಗಿ ಮಳೆ ಬಾರದಿದ್ದಾಗ ಬಸವೇಶ್ವರ ಸ್ವಾಮಿಯನ್ನು ಸೂಳೆಕೆರೆ ಸಿದ್ದಪ್ಪನ ದೇವಸ್ಥಾನಕ್ಕೆ ಕರೆತಂದು ತಂದು ಪೂಜೆ ಸಲ್ಲಿಸುವ ಸಂಪ್ರದಾಯ ನಮ್ಮ ಹಿರಿಯರ ಕಾಲದಿಂದಲೂ ಇದೆ. ಕಳೆದ ಬಾರಿಯೂ ಹೀಗೆ ಪೂಜೆ ಮಾಡಿದಾಗ ಉತ್ತಮ ಮಳೆಯಾದ ಉದಾಹರಣೆಗಳಿವೆ ಎಂದರು.
ಪ್ರಕೃತಿ ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಮಳೆಯಿಲ್ಲದೆ ರೈತನಿಲ್ಲ, ರೈತನಿಲ್ಲದೆ ದೇಶವಿಲ್ಲ. ನಮ್ಮ ಹಿರಿಯರು ಪ್ರಕೃತಿಯನ್ನೇ ದೇವರೆಂದು ಪೂಜಿಸುತ್ತಿದ್ದರು. ಆದರೆ ಇಂದು ಮನುಷ್ಯ ಪ್ರಕೃತಿಯಿಂದ ದೂರವಾಗುತ್ತಿರುವುದರಿಂದ ಸಂಕಷ್ಟಗಳು ಎದುರಾಗುತ್ತಿವೆ. ರೈತರು ಧೈರ್ಯಗೆಡಬಾರದು, ಭಕ್ತಿ ಹಾಗೂ ಶ್ರದ್ಧೆಯಿಂದ ಮಾಡುವ ಪ್ರಾರ್ಥನೆಗೆ ದೇವರು ಖಂಡಿತವಾಗಿ ಒಲಿಯುತ್ತಾನೆ. ನಾವೆಲ್ಲರೂ ಒಗ್ಗೂಡಿ ಪ್ರಕೃತಿಯನ್ನು ರಕ್ಷಿಸುವ ಕೆಲಸ ಮಾಡೋಣ ಎಂದು ಹೇಳಿದರು. ಹಿರೇಉಡ ಗ್ರಾಮದ ಮುಖಂಡರಾದ ಮಹೇಶ್ವರಪ್ಪ ಗೌಡ್ರು, ಬಸವರಾಜಪ್ಪ, ಓಂಕಾರಪ್ಪ, ಉಮೇಶ್, ಬಸಯ್ಯ ಮತ್ತಿತರರಿದ್ದರು.