ಟಿ.ಎನ್. ಜಗದೀಶ್, ಚನ್ನಗಿರಿ
ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದ್ದು, ಕೃಷಿ ನಷ್ಟದ ದಾರಿ ಎಂದು ಕೊರಗುವವರ ನಡುವೆ ಹೊದಿಗೆರೆ ಗ್ರಾಮದ ಪ್ರಗತಿಪರ ರೈತ ಜೆಸಿಬಿ ಮಹಾದೇವಪ್ಪ 1.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಹಾಗೂ ಸೈಲೇಜ್ ತಯಾರಿಕೆ ಮೂಲಕ ಕೃಷಿಯನ್ನು ಲಾಭದಾಯಕ ಎಂದು ತೋರಿಸಿ ಇಡೀ ತಾಲೂಕಿಗೆ ಮಾದರಿಯಾಗಿದ್ದಾರೆ.
ಕಳೆದ 10 ವರ್ಷಗಳಿಂದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆಯನ್ನು ಸಂಪೂರ್ಣ ಬಿಟ್ಟಿರುವ ಅವರು, ಕುಟುಂಬದ ಎಲ್ಲ ಸದಸ್ಯರೊಂದಿಗೆ ಸಾಂಪ್ರದಾಯಿಕ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸು ಕಂಡುಕೊಂಡಿದ್ದಾರೆ.
1 ಎಕರೆ 26 ಗುಂಟೆ ಜಮೀನಿನಲ್ಲಿ ನಿರ್ಮಿಸಿರುವ ಅವರ ತೋಟವೇ ಸದ್ಯ ಒಂದು ಕೃಷಿ ವಿಶ್ವವಿದ್ಯಾಲಯದಂತಿದೆ. ಸುತ್ತಮುತ್ತಲಿನ ರೈತರು ಈ ತೋಟಕ್ಕೆ ಭೇಟಿ ನೀಡಿ ಸಾವಯವ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ವ್ಯಾಸಂಗದ ಬಳಿಕ ತಂದೆಯ ಹಾದಿಯಲ್ಲೇ ಕೃಷಿಯತ್ತ ಒಲವು ತೋರಿದ ಇವರು ನಿರಂತರ ಹೊಸ ಪ್ರಯೋಗಗಳ ಮೂಲಕ ಪ್ರತಿವರ್ಷ ಸುಮಾರು 12 ಲಕ್ಷ ಲಾಭ ಗಳಿಸುತ್ತಿದ್ದಾರೆ.
ಜಮೀನಿನಲ್ಲಿ 90 ಅಡಕೆ ಮರಗಳು, 900 ಕಾಳುಮೆಣಸು ಬಳ್ಳಿಗಳು, ಬಾಳೆ ಮತ್ತು ಮೆಕ್ಕೆಜೋಳವನ್ನು ಅಂತರಬೆಳೆಯಾಗಿ ಬೆಳೆದಿದ್ದಾರೆ. ಈಗ 150 ಕಾಫಿ ಹಾಗೂ ಏಲಕ್ಕಿ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮನೆಯಲ್ಲಿದ್ದ 2 ದೇಸಿ ತಳಿ ಆಕಳು ಹಾಗೂ 6 ಎಮ್ಮೆಗಳ ಸಗಣಿಯಿಂದ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಸಿದ್ಧಪಡಿಸಿ ಭೂಮಿಯ ಫಲವತ್ತತೆ ಕಾಪಾಡಿಕೊಂಡಿದ್ದಾರೆ. ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜೀವಾಮೃತ ಘಟಕ ಸ್ಥಾಪಿಸಿದ್ದು, ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆಯಡಿ ತರಬೇತಿ ಪಡೆದು ಘನ ಜೀವಾಮೃತ, ಮತ್ಸ್ಯಜನ್ಯ ಹಾಗೂ ವೇಸ್ಟ್ ಡಿಕಾಂಪೋಸರ್ ತಾವೇ ತಯಾರಿಸಿ ಬಳಸುತ್ತಿದ್ದಾರೆ. ಇದರಿಂದ ಕೃಷಿ ಖರ್ಚು ಶೇ. 70ರಷ್ಟು ಕಡಿಮೆಯಾಗಿದೆ. ಹೈನುಗಾರಿಕೆ ಜತೆಗೆ ಬೇಸಿಗೆಯ ಮೇವಿನ ಅಭಾವ ನೀಗಿಸಲು ಮೆಕ್ಕೆಜೋಳದಿಂದ ಬ ಸುಮಾರು 20 ಟನ್ ಸೈಲೇಜ್ ತಯಾರಿಸಿ ಇತರ ರೈತರಿಗೂ ಅರಿವು ಮೂಡಿಸುತ್ತಿದ್ದಾರೆ.
ಮಹಾದೇವಪ್ಪ ಅವರ ಪತ್ನಿ ಹಾಗೂ ಐಟಿಐ ಮುಗಿಸಿರುವ ಇಬ್ಬರು ಗಂಡು ಮಕ್ಕಳಾದ ಪವನ್ ಮತ್ತು ಸೂರ್ಯಪ್ರಕಾಶ್ ಉದ್ಯೋಗ ಅರಸಿ ಹೊರಹೋಗದೆ, ತಂದೆಯ ಕೃಷಿ ಕಾಯಕಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಸಾಂಪ್ರದಾಯಿಕ ಕೃಷಿ ಯಲ್ಲಿ ಆಸಕ್ತಿ ಇದ್ದುದರಿಂದ ಈ ಕ್ಷೇತ್ರದಲ್ಲೇ ಬದುಕು ಕಟ್ಟಿಕೊಂಡಿ ದ್ದೇನೆ. ಕಡಿಮೆ ಜಮೀನಿದೆ ಎಂದು ಕೊರಗದೆ ರಾಸಾಯನಿಕ ತ್ಯಜಿಸಿ ಸಾವಯವ ಕೃಷಿ ಮಾಡುತ್ತಿರುವುದರಿಂದ ಆರೋಗ್ಯ ಹಾಗೂ ಆರ್ಥಿಕ ನೆಮ್ಮದಿ ಸಿಕ್ಕಿದೆ.ಜೆಸಿಬಿ ಮಹಾದೇವಪ್ಪ, ಪ್ರಗತಿಪರ ರೈತ, ಹೊದಿಗೆರೆ.
ಮಹಾದೇವಪ್ಪ ಅವರು ಕಚೇರಿಗೆ ಬಂದು ಸಾವಯವ ಕೃಷಿ ಕುರಿತು ಮಾಹಿತಿ ಪಡೆದು, ತಮ್ಮ ಜಮೀನಿನಲ್ಲಿ ಕಡಿಮೆ ಖರ್ಚಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.ಅರುಣ್ ಸಹಾಯಕ ಕೃಷಿ ನಿರ್ದೇಶಕ, ಚನ್ನಗಿರಿ.