ಮಾಯಕೊಂಡ ಹೋಬಳಿ ಗೋಣಿವಾಡ ಕ್ಯಾಂಪು (ದಾಸಪ್ಪನಗರ) ಗ್ರಾಮದ ಎಸ್ಸಿ ಕಾಲನಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೊಚ್ಚೆ ನೀರು ರಸ್ತೆ ಬದಿಯಲ್ಲಿ ನಿಂತಿರುವುದು. development
- ಮೂಲ ಸೌಲಭ್ಯ ಒದಗಿಸದ ಗ್ರಾಮ ಪಂಚಾಯಿತಿ
- ಗ್ರಾಮಸ್ಥರ ಪರದಾಟ
- ಅವನತಿಯ ಅಂಚಿನಲ್ಲಿ ಶಾಲಾ ಕಟ್ಟಡ
ಪಿ.ಎಚ್. ಕೃಷ್ಣಮೂರ್ತಿ, ಮಾಯಕೊಂಡ
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳೇ ಕಳೆದರೂ ಕೆಲ ಹಳ್ಳಿಗಳಲ್ಲಿ ಮೂಲ ಸೌಲಭ್ಯ ಗಳ ಸಮಸ್ಯೆ ಕಾಡುತ್ತಿದೆ. ಅಭಿವೃದ್ಧಿ ಮರೀಚಿಕೆ ಯಾಗಿದೆ. ಮಾಯ ಕೊಂಡದ ಕೆಲ ಹಳ್ಳಿಗಳು ಈ ಸಾಲಿನಲ್ಲಿ ಸೇರುತ್ತವೆ. ಸೌಲಭ್ಯಗಳ ಕೊರತೆ ಯಿಂದಾಗಿ ಜನರು ಪರದಾಡುವಂತಾಗಿದೆ. development
ಮತ್ತಿ ಗ್ರಾಪಂ ವ್ಯಾಪ್ತಿಯ ಗೋಣಿವಾಡ ಹಾಗೂ ಗೋಣಿವಾಡ ಕ್ಯಾಂಪ್ (ದಾಸಪ್ಪನಗರ) ನಲ್ಲಿ ಕನಿಷ್ಠ ಮೂಲ ಸೌಕರ್ಯ ದೊರೆಯದ ಕಾರಣ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗೋಣಿವಾಡ ಹಾಗೂ ಗೋಣಿವಾಡ ಕ್ಯಾಂಪ್‌ನಲ್ಲಿ 600ಕ್ಕೂ ಅಧಿಕ ಮನೆಗಳಿವೆ, ಎರಡು ಗ್ರಾಮಗಳಿಂದ 4 ಮಂದಿ ಗ್ರಾಪಂ ಸದಸ್ಯರಿದ್ದಾರೆ.
ಚರಂಡಿ ವ್ಯವಸ್ಥೆ: ಜನವಸತಿ ಪ್ರದೇಶಗಳಿಗೆ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಅಲ್ಲಲ್ಲೇ ಕೊಚ್ಚೆ ನೀರು ನಿಂತು ಕೆಟ್ಟವಾಸನೆ ಬರುತ್ತಿದೆ. ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರದ ಎದುರಿನ ಚರಂಡಿಯಲ್ಲಿ ಕೊಚ್ಚೆ ನೀರು ನಿಲ್ಲುತ್ತದೆ ಹಾಗೂ ಗೋಣಿವಾಡ ಕ್ಯಾಂಪ್, ಎಸ್ಸಿ-ಎಸ್ಟಿ ಕಾಲನಿಗಳಲ್ಲೂ ಚರಂಡಿಗಳಿಲ್ಲದ ಕಾರಣ ಜನರು ಪರದಾಡುವಂತ್ತಾಗಿದೆ.
ಬೀದಿ ದೀಪಗಳಿಲ್ಲದೆ ಕಗ್ಗತ್ತಲು: ಇಲ್ಲಿನ ವಿದ್ಯುತ್ ಕಂಬಗಳಿಗೆ ಹಾಕಲಾಗಿದ್ದ ಬಲ್ಬಗಳು ಸುಟ್ಟು ಹೋಗಿದ್ದು, ರಾತ್ರಿ ಆವರಿಸುತ್ತಿದ್ದಂತೆ ಊರಿಗೂರೇ ಕತ್ತಲಲ್ಲಿ ಮುಳುಗುತ್ತದೆ ಎಂದು ಗ್ರಾಮಸ್ಥರು ವಿಜಯವಾಣಿಯೊಂದಿಗೆ
ಕುಡಿಯುವ ನೀರಿನ ಸಮಸ್ಯೆ: ಗೋಣಿವಾಡ ಕ್ಯಾಂಪ್‌ನಲ್ಲಿ 2016-17ರಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ಮತ್ತಿ, ಮತ್ತಿ ಕ್ಯಾಂಪ್, ಗೋಣಿವಾಡ ಗೋಣಿವಾಡ ಕ್ಯಾಂಪ್ (ದಾಸಪ್ಪನಗರ), ತಿಮ್ಮಪ್ಪನಗರ, ಹೊನ್ನಮರಡಿ, ಆಂಜನೇಯ ಕ್ಯಾಂಪ್ ಇನ್ನು ಹಲವು ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ದೃಷ್ಟಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸ ಲಾಯಿತು. ಆದರೆ, 10ವರ್ಷ ಕಳೆದರೂ ನೀರಿನ ಪೂರೈಕೆಯಾಗಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
ಸಾರಿಗೆ ಕೊರತೆ : ಮಾಯಕೊಂಡ ಹೋಬಳಿಯ ಹೂವಿನ ಮಡು, ಗೋಣಿವಾಡ ಗ್ರಾಮಗಳ ಸಂಪರ್ಕಿ ಸುವ ರಸ್ತೆ ಅಭಿವೃದ್ಧಿ ಕಂಡಿಲ್ಲ ಮತ್ತು ಈ ಭಾಗದ ಜನ ಬಸ್ಸಿನ ಸೌಲಭ್ಯವನ್ನೇ ಪಡೆದಿಲ್ಲದಿರುವುದು ವಿಪರ್ಯಾಸ. ಸಾರಿಗೆ ಸೌಕರ್ಯವಿಲ್ಲದೇ ಕಾರಿಗನೂರು ಅಡ್ಡ ರಸ್ತೆಯಿಂದ ಗೋಣಿವಾಡ ಗ್ರಾಮಕ್ಕೆ 2.5 ಕಿಮೀ ಹಾಗೂ ಹೂವಿನಮಡು ಗ್ರಾಮಕ್ಕೆ 3ಕಿಮೀ ದೂರವಿದ್ದು ಜನರು ನಿತ್ಯ ಓಡಾಡಲು ಹರಸಾಹಸ ಪಡುವಂತಹ ಸ್ಥಿತಿ ಇದೆ.
ಶಿಥಿಲಾವಸ್ಥೆ ತಲುಪಿದ ಜ್ಞಾನ ದೇಗುಲ: ಗೋಣಿವಾಡ ಕ್ಯಾಂಪಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ 45-50 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯ 3 ಕೊಠಡಿಗಳು ಸಂಪೂರ್ಣ ಹಾಳಾಗಿದ್ದು ಶಿಥಿಲಾವಸ್ಥೆ ತಲುಪಿವೆ. ಮಕ್ಕಳಿಗೆ ಈ ಶಾಲೆಯಲ್ಲಿ ಕುಳಿತು ಪಾಠ ಕೇಳಲು ಭಯವಾಗುತ್ತಿದ್ದು ಅಂಗನವಾಡಿ ನೂತನ ಕಟ್ಟಡದಲ್ಲಿ ತುರ್ತು ಅವಶ್ಯಕತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.
"
ಮತ್ತಿ ಗ್ರಾಪಂ ವ್ಯಾಪ್ತಿಯ ಗೋಣಿವಾಡ, ಗೋಣಿವಾಡ ಕ್ಯಾಂಪ್‌ಗಳಿಗೆ ಭೇಟಿ ನೀಡಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ, ಮೂಲ ಸೌಕರ್ಯಗಳ ಕುಂದು ಕೊರತೆ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
— ಗಿತ್ತೆ ಮಾಧವ ವಿಠಲರಾವ್, ಜಿಪಂ ಸಿಇಒ, ದಾವಣಗೆರೆ ಜಿಲ್ಲೆ.
"
ಗ್ರಾಮಕ್ಕೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ, ಆಸ್ಪತ್ರೆ, ಶಾಲೆ, ಅಂಗನವಾಡಿ, ಸೇರಿದಂತೆ ಅಗತ್ಯ ಮೂಲ ಸೌಕರ್ಯ ಅವಶ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮದ ಸಮಸ್ಯೆ ಬಗೆಹರಿಸಲು ಮುಂದಾಗಬೇಕು.
— ಮಂಜುನಾಥ್ ಗ್ರಾಪಂ ಮಾಜಿ ಸದಸ್ಯ, ಗೋಣಿವಾಡ ಕ್ಯಾಂಪ್
"
ಗೋಣಿವಾಡ ಕ್ಯಾಂಪಿನ ಕಾಲನಿಗಳಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ಚರಂಡಿ ನೀರು ರಸ್ತೆಯಲ್ಲಿ ಹರಿದು ಕೆಟ್ಟವಾಸನೆ ಬರುತ್ತಿದೆ. ಬೀದಿ ದೀಪ ಇಲ್ಲ. ಗ್ರಾಪಂ ತಕ್ಷಣ ಬೀದಿ ದೀಪ ಅಳವಡಿಕೆ ಹಾಗೂ ಚರಂಡಿಗಳ ಸ್ವಚ್ಛತೆಗೆ ಗಮನ ಹರಿಸಬೇಕು.
— ನೀಲಮ್ಮ ಗೋಣಿವಾಡ ಕ್ಯಾಂಪು(ದಾಸಪ್ಪನಗರ)