ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ‘ರಂಗದಂಗಳದಲ್ಲಿ ತಿಂಗಳ ಪ್ರತಿಭೆ’ ಸರಣಿ ಸಂವಾದ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ಅವರನ್ನು ಗೌರವಿಸಲಾಯಿತು. ವಾಸುದೇವ ಎಸ್.ರಾಯ್ಕರ್, ಮಹೇಶ್ವರಪ್ಪ ದೊಡ್ಡಮನಿ, ಎ.ಭದ್ರಪ್ಪ, ಚಿಂದೋಡಿ ಚಂದ್ರಧರ, ಚಿಂದೋಡಿ ಮಧುಕೇಶ್, ಪಾಪು ಕಲ್ಲೂರ ಇತರರಿದ್ದರು.
- ರಂಗಭೂಮಿ ಎಂಬುದು ಚೌಕಟ್ಟಿನ ಜೇನು
- ಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ಅಭಿಮತ
- ರಂಗದಂಗಳದಲ್ಲಿ ತಿಂಗಳ ಪ್ರತಿಭೆ ಸಂವಾದ
ದಾವಣಗೆರೆ: ರಂಗ ಕಲಾವಿದರು ಹಾಸ್ಯ, ರೌದ್ರ ಪಾತ್ರವೇ ಇರಲಿ, ಸಂತೋಷ ಅಥವಾ ದುಃಖವೇ ಇರಲಿ, ಪ್ರೇಕ್ಷಕರನ್ನು ರಂಜಿಸಬೇಕು. ಇಲ್ಲವಾದಲ್ಲಿ ಅವರ ಬದುಕು ಹಾಗೂ ಹಚ್ಚಿದ ಬಣ್ಣ ನಿರರ್ಥಕ ಎಂದು ಹಿರಿಯ ರಂಗಕರ್ಮಿ, ಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ಹೇಳಿದರು.
ನಗರದ ಪಿಬಿ ರಸ್ತೆಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ಟೆಂಟ್‌ನಲ್ಲಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ಭಾನುವಾರ ಹಮ್ಮಿಕೊಂಡಿದ್ದ ‘ರಂಗದಂಗಳದಲ್ಲಿ ತಿಂಗಳ ಪ್ರತಿಭೆ’ ಸರಣಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕವಿ ಎಚ್ಚೆಸ್ವಿ ಹೇಳುವ ಹಾಗೆ ಕಲಾವಿದರು ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ..’ ಎಂಬಂತೆ ಇರಬೇಕು. ಅಹಂಕಾರದಿಂದಲೂ ದೂರವಿರಬೇಕು ಎಂದರು. ನಾನು ಹೆಚ್ಚು ಓದಿಲ್ಲ. ಅನೇಕರಿಂದಾಗಿ ದೊಡ್ಡವನಾದೆ. ಪುಸ್ತಕಗಳನ್ನು ಈಗಲೂ ಓದುತ್ತೇವೆ. ಯುವ ಪೀಳಿಗೆ ಪುಸ್ತಕ ಓದಬೇಕು. ಸಮಾಜಕ್ಕಾಗಿ ಶೇ.25ರಷ್ಟಾದರೂ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ರಂಗಭೂಮಿ ಎಂಬುದು ಚೌಕಟ್ಟಿನ ಜೇನು ಆದರೆ, ಜಾನಪದ, ಬಯಲಾಟ ಎಂಬುದು ಬೆಳದಿಂಗಳ ಜೇನು ಎಂದು ಬಣ್ಣಿಸಿದ ಅವರು, 60-70ರ ದಶಕದವರೆಗೆ ರಂಗಭೂಮಿ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳ ಕಾರಣಕ್ಕೆ ವೈಭವಯುತ ಹಾಗೂ ವೈಶಿಷ್ಟೃಪೂರ್ಣವಾಗಿತ್ತು. ಅಲ್ಲಿ ಒಂದು ಮಾತು ಆಡಬೇಕಾದರೂ ಯೋಚನೆ ಮಾಡಬೇಕಿತ್ತು.
ಇತ್ತೀಚಿನ 25-30 ವರ್ಷದಿಂದ ಏನು ಮಾತಾಡಿದರೂ ನಡೆಯುತ್ತದೆ ಎಂಬ ಪರಂಪರೆ ಬಂದಿತು. ಆದರೆ ಜನರು ಅದನ್ನು ಸ್ವೀಕಾರ ಮಾಡದೆ ನಿಂದಿಸುತ್ತಾರೆ. ಗೇಟ್‌ನಿಂದ ಹೊರಹೋದ ಪ್ರೇಕ್ಷಕ ಅಂತರಂಗ ಬಹಿರಂಗದಲ್ಲಿ ನಮ್ಮ ಬೆನ್ನು ಚಪ್ಪರಿಸಿದರೆ ಆಗಲೇ ಕಲಾವಿದರು ಗೆದ್ದ ಎಂಬ ಭಾವಿಸಬೇಕಾಗುತ್ತದೆ ಎಂದೂ ಹೇಳಿದರು.
ಚಿಂದೋಡಿ ಕಂಪನಿ ಕಷ್ಟ ಅನುಭವಿಸರಬಹುದು. ಆದರೆ ನಾವು ನಲುಗಿಲ್ಲ, ಕುಗ್ಗಿಯೂ ಇಲ್ಲ ಎಂದು ಸಾಹಿತಿ ಬಾ.ಮ. ಬಸವರಾಜಯ್ಯ ಬರಹಕ್ಕೆ ಪ್ರತಿಕ್ರಿಯಿಸಿದ ಬಂಗಾರೇಶ್, ಶಿರಡಿ ಸಾಯಿಬಾಬಾ ನಾಟಕವನ್ನು ದಾವಣಗೆರೆಯಲ್ಲಿಯೂ ಪ್ರದರ್ಶಿಸುವ ಆಲೋಚನೆ ಇದೆ. ಕಲ್ಯಾಣ ಕ್ರಾಂತಿಯನ್ನು ಚಲಿಸುವ ರಂಗಮಂಟಪದಲ್ಲಿ ಪ್ರದರ್ಶಿಸುವುದು ನನ್ನ ಮಹತ್ತರ ಆಸೆಯಾಗಿದೆ ಎಂದೂ ಹೇಳಿಕೊಂಡರು.
ನನ್ನ ಕನಸುಗಳು ಸಾಕಷ್ಟಿದ್ದರೂ ಆರ್ಥಿಕ ಸಮಸ್ಯೆಗಳಿವೆ. ಹಾನಗಲ್ ಕುಮಾರಸ್ವಾಮಿ ಅವರ ಕುರಿತಾದ ಸಿನಿಮಾಕ್ಕೆ 3 ವರ್ಷ ದುಡಿದಿದ್ದೇನೆ. ಚಿತ್ರೀಕರಣವಾಗಿದ್ದು, ನಿಂತಲ್ಲೇ ನಿಂತಿದೆ. ಸಂಭಾಷಣೆಗೆ ಅನೇಕ ಸ್ವಾಮೀಜಿಗಳಿಂದ ಪ್ರಶಂಸೆಯ ಪತ್ರಗಳೂ ಬಂದಿದ್ದವು. ಆದರೆ ಗಾಂಧೀಜಿ ತತ್ವದ ಪರಿಪಾಲಕರಾಗಿ ಕುಮಾರಸ್ವಾಮಿ ಅವರನ್ನು ಚಿತ್ರಿಸಲು ಮುಂದಾಗಿದ್ದೆ. ಆದರೆ ಕೆಲ ಸ್ವಾಮೀಜಿಗಳ ಭಾವನೆಯೇ ಬೇರೆಯದೇ ಆಗಿತ್ತು. ಆರ್ಥಿಕ ನೆರವು ನೀಡಿದರೆ ಚಿತ್ರ ಪೂರ್ಣಗೊಳಿಸಲು ಸಿದ್ಧ ಎಂದರು.
ಕನಕಲಕ್ಷ್ಮೀ ಹಾಗೂ ಕೊಟ್ರೇಶ್ ಸಂವಾದ ನಡೆಸಿಕೊಟ್ಟರು. ಚಿನ್ನ-ಬೆಳ್ಳಿ ವರ್ತಕ ವಾಸುದೇವ ಎಸ್. ರಾಯ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ದೊಡ್ಡಮನಿ, ಮಾಜಿ ಅಧ್ಯಕ್ಷ ಎ.ಭದ್ರಪ್ಪ, ಕೆಬಿಆರ್ ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಚಂದ್ರಧರ, ಚಿಂದೋಡಿ ಮಧುಕೇಶ್, ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ಮಾಲೀಕ ಪಾಪು ಕಲ್ಲೂರ, ಕಲಾವಿದರಾದ ಪದ್ದಪ್ಪ, ಸ್ಪೂರ್ತಿ ಸಂಘದ ಎನ್. ಎಸ್. ರಾಜು, ರಂಗಕರ್ಮಿ ಬಸವರಾಜ ಐರಣಿ, ನಾಗವೇಣಿ ಇದ್ದರು.
ಅತ್ತೆ ಜತೆಗಿನ ಬಾಂಧವ್ಯ ಹಾಲು-ಸಕ್ಕರೆ! ನನ್ನ ಅತ್ತೆ ಚಿಂದೋಡಿ ಲೀಲಮ್ಮ ಅವರೊಂದಿಗಿನ ಬಾಂಧವ್ಯ ಹಾಲು-ಸಕ್ಕರೆಯಂತಿತ್ತು. ಗಾನಯೋಗಿ ಪಂಚಾಕ್ಷರಿ ಸಿನಿಮಾಕ್ಕೆ ಅವರೇ ಬಂಡವಾಳ ಹಾಕಿದ್ದರು. ಈ ಚಿತ್ರದಿಂದ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಎಸ್‌ಪಿಬಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತು. ಹಂಸಲೇಖಾ ಕೂಡ ಪ್ರಶಸ್ತಿ ಗಳಿಸಿದ್ದಕ್ಕೆ ಈ ಚಿತ್ರದಿಂದ ನನ್ನ ಪಾಪ ವಿಮೋಚನೆಯಾಗಿದೆ ಎಂದಿದ್ದರು ಎಂದು ಬಂಗಾರೇಶ್ ಸ್ಮರಿಸಿದರು.
ವೃತ್ತಕ್ಕೆ ಹಿರಿಯರ ಹೆಸರಿಡಲಾಗಿಲ್ಲ..!ದಾವಣಗೆರೆಯಲ್ಲಿ ವೈದ್ಯಕೀಯ ಕಾಲೇಜು ಬರುತ್ತದೆ ಎಂಬ ಸುದ್ದಿ ಬಂದರೂ ಸಾಕು ಕೆಲವರು ಗಂಟು ಹಿಡಿದುಕೊಂಡು ಹೋಗುತ್ತಾರೆ. ಆದರೆ ನೂರು ವರ್ಷ ಇತಿಹಾಸಕ್ಕೆ ಹತ್ತಿರವಿರುವ ಕೆಬಿಆರ್ ಡ್ರಾಮಾ ಕಂಪನಿಗೆ ಶ್ರಮಿಸಿದ ಶಾಂತವೀರಪ್ಪ, ಚಿಂದೋಡಿ ವೀರಪ್ಪ ಅವರ ಹೆಸರನ್ನು ಇಲ್ಲಿನ ಒಂದು ವೃತ್ತ, ರಸ್ತೆಗೆ ಇರಿಸಲಾಗದಷ್ಟು ದುಸ್ಥಿತಿ ಇದೆ ಎಂದು ಬಂಗಾರೇಶ್ ಬೇಸರ ವ್ಯಕ್ತಪಡಿಸಿದರು.
ಸಿನಿಮಾ ಚಿತ್ರೀಕರಣಕ್ಕೆ ಅನೇಕ ಟೇಕ್ ಇರುತ್ತವೆ. ಆದರೆ ಪ್ರೇಕ್ಷಕರ ಎದುರೇ ಒಂದೇ ಟೇಕ್‌ನಲ್ಲಿ ಪ್ರದರ್ಶಿಸುವ ರಂಗ ಕಲಾವಿದರನ್ನು ನಾವಿಂದು ಅನುಕರಿಸಬೇಕಿದೆ. ರಂಗಭೂಮಿ ನಶಿಸದಿರಲು ಎರಡನೇ ಹಂತದ ಕಲಾವಿದರನ್ನು ಬೆಳೆಸಬೇಕಿದೆ.
— ವಾಸುದೇವ ಎಸ್. ರಾಯ್ಕರ್, ಚಿನ್ನ-ಬೆಳ್ಳಿ ವರ್ತಕ.