ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಬುಧವಾರ, ಡಾ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. 
ದಾವಣಗೆರೆ

ಶಾಮನೂರು ನುಡಿನಮನಕ್ಕೆ ಗಣ್ಯರ ದಂಡು

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆಯಲ್ಲಿ ನಾಳೆ ಸಮಾರಂಭ
  • ದೊಡ್ಡ ಮಟ್ಟದಲ್ಲಿ ಆಯೋಜನೆ
  • ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾಹಿತಿ
ದಾವಣಗೆರೆ : ಹಿರಿಯ ಶಾಸಕ ದಿ. ಡಾ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮವನ್ನು ಡಿ. 26 ರಂದು ನಗರದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಿದ್ಧತೆಗಳು ಭರದಿಂದ ನಡೆದಿವೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಮಾರಂಭಕ್ಕೆ ಮಾಡಿರುವ ವ್ಯವಸ್ಥೆ ಹಾಗೂ ಸಿದ್ಧತೆಯ ವಿವರಗಳನ್ನು ನೀಡಿದರು.
ಅಂದು ಬೆಳಗ್ಗೆ 10.15ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಸಿಎಂ, ಡಿಸಿಎಂ ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ. ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಮನೂರು ಅವರ ಜೀವನ ಕುರಿತ ಕಿರು ಹೊತ್ತಿಗೆ ಬಿಡುಗಡೆ ಗೊಳಿಸುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅಮೃತ ಪುರುಷ’ ಸಾಕ್ಷೃಚಿತ್ರ ಬಿಡುಗಡೆ ಗೊಳಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಗೊಳಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಶಿವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಮಠಾಧೀಶರ ಸಾನ್ನಿಧ್ಯ

ಸಮಾರಂಭದಲ್ಲಿ ಪಂಚ ಪೀಠಾಧೀಶರು, ಸಿರಿಗೆರೆ, ಸುತ್ತೂರು, ಸಿದ್ಧಗಂಗಾ, ಆದಿಚುಂಚನಗಿರಿ, ಕನಕ ಗುರುಪೀಠ, ಕೋಡಿಮಠ ಸೇರಿ ವಿವಿಧ ಮಠಾಧೀಶರು ಆಶೀರ್ವಚನ ನೀಡುವರು. ಸ್ವಾಮೀಜಿಗಳಿಗಾಗಿ ಬಾಪೂಜಿ ಬ್ಯಾಂಕ್ ಸಮುದಾಯ ಭವನ, ಗುರು ಬಕ್ಕೇಶ್ವರ ಕಲ್ಯಾಣ ಮಂಟಪ, ಅಭಿನವ ರೇಣುಕ ಮಂದಿರದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್ ಹೇಳಿದರು.
ನೂರು ಎಕರೆ ಪ್ರದೇಶದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ಗುರುಗಳು, ಗಣ್ಯರು, ಬಲ ಭಾಗದ ವೇದಿಕೆಯಲ್ಲಿ ಹರ ಗುರು ಚರ ಮೂರ್ತಿಗಳು, ಎಡ ಭಾಗದ ವೇದಿಕೆಯಲ್ಲಿ ಕುಟುಂಬದ ಸದಸ್ಯರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ ಮುಂಭಾಗದಲ್ಲಿ 25 ಸಾವಿರಕ್ಕೂ ಹೆಚ್ಚು ಆಸನಗಳನ್ನು ಹಾಕಲಾಗುತ್ತಿದೆ ಎಂದು ತಿಳಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ನುಡಿ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಪ್ರಧಾನ ಕಾರ್ಯದರ್ಶಿ ರೇಣುಕ ಪ್ರಸನ್ನ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.