ಹರಿಹರ ನಗರದ ಎಲ್‌ಐಸಿ ಕಚೇರಿಯಿಂದ ಗಾಂಧಿ ವೃತ್ತರದವರೆಗೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶುಕ್ರವಾರ ಶಾಸಕ ಬಿ.ಪಿ.ಹರೀಶ್ ವೀಕ್ಷಣೆ ಮಾಡಿದರು. 
ದಾವಣಗೆರೆ

ಸತೀಶ್ ಜಾರಕಿಹೊಳಿ ವಿರುದ್ಧ ಹಕ್ಕು ಚ್ಯುತಿ ದೂರು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಹರೀಶ್ ಹೇಳಿಕೆ
  • 5 ಕೋಟಿ ರೂ.ವೆಚ್ಚದ ರಸ್ತೆಗೆ ಚಾಲನೆ
  • ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ವೀಕ್ಷಣೆ
ಹರಿಹರ: ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ಹಕ್ಕು ಚ್ಯುತಿ ದೂರು ನೀಡಲಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು. 
ನಗರದ ಎಲ್‌ಐಸಿ ಕಚೇರಿಯಿಂದ ಗಾಂಧಿ ವೃತ್ತದವರೆಗೂ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚೆಗೆ ತಾಲೂಕಿನ ರಾಜನಹಳ್ಳಿ ಹಾಗೂ ಬೆಳ್ಳೂಡಿ ಗ್ರಾಮಕ್ಕೆ ತಲಾ 5 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ಆಗಮಿಸಿದ್ದರು. ಆದರೆ ಈ ಕಾಮಗಾರಿಯ ಬಗ್ಗೆಯಾಗಲಿ ಅಥವಾ ಸಚಿವರ ಕಾರ್ಯಕ್ರಮದ ಬಗ್ಗೆಯಾಗಲಿ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದರು.
ಸರ್ಕಾರದ ನಿಯಮದ ಪ್ರಕಾರ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕು, ಅವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಭೂಮಿಪೂಜೆ ಮಾಡಬೇಕು. ಆದರೆ ಸಚಿವರು ಶಿಷ್ಟಾಚಾರವನ್ನು ಗಾಳಿಗೆ ತೂರಿ ತಮ್ಮ ಪಕ್ಷದ ಕಾರ್ಯಕ್ರಮದ ರೀತಿ ಮಾಡಿದ್ದು ಸರಿಯಲ್ಲ. ಈ ಕಾರಣಕ್ಕಾಗಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ದೂರನ್ನು ನೀಡಲಾಗಿದೆ ಎಂದರು.
ನಗರದಲ್ಲಿ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಹಲವು ಕಾಮಗಾರಿಗಳಿಗೆ ಕಾಂಗ್ರೆಸ್ ಮುಖಂಡರು ಗುದ್ದಲಿ ಪೂಜೆ ನೆರವೇರಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಅನುಭವ ಕೊರತೆ ಹಾಗೂ ಶಿಷ್ಟಾಚಾರದ ಜ್ಞಾನ ಇಲ್ಲದವರು ಈ ತರಹದ ಕೆಲಸ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. 
ಈಗಾಗಲೇ ದೂಡಾ ಅಧಿಕಾರಿಗಳು ಹಕ್ಕು ಚ್ಯುತಿ ಕೇಸಲ್ಲಿ ಬೆಂಗಳೂರಿಗೆ ಅಲೆದಾಡುತ್ತಿದ್ದಾರೆ ಮತ್ತು ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದರೆ ಅವರಿಗೆ ಏನು ಹೇಳಬೇಕು ಹೇಗೆ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು. 
ಗಂಗನರಸಿ ಕ್ರಾಸ್‌ನಿಂದ ಚಿಕ್ಕಬಿದರಿ ಗ್ರಾಮದವರೆಗೆ ಸಿಸಿ ರಸ್ತೆ, ಸಿಆರ್‌ಐಎಫ್ ಅನುದಾನದಲ್ಲಿ ನಗರದ ಎಲ್‌ಐಸಿ ಕಚೇರಿಯಿಂದ ಗಾಂಧಿ ವೃತ್ತರದವರೆಗೂ ರಸ್ತೆಯ ಡಾಂಬರೀಕರಣ, ಬೀರೂರು ಸಮ್ಮಸಗಿ ರಸ್ತೆ ಡಾಂಬರೀಕರಣ, ಎಲ್ ಐಸಿ ಕಚೇರಿಯಿಂದ ಬೈಪಾಸ್‌ವರೆಗೂ ಸಿಸಿ ರಸ್ತೆಯ ಕಾಮಗಾರಿಯೂ ಸೇರಿ ವಿವಿಧ ರಸ್ತೆಯ ಕಾಮಗಾರಿಗಳು ನಡೆಯುತ್ತಿದ್ದು ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಯನ್ನು ಮಾಡುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ ಎಂದರು.