ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದಡಿ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಾಲಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶೀಲವಂತ ಶಿವಕುಮಾರ್, ಪರಮೇಶ್ವರ ಹೆಗಡೆ, ಡಾ.ಎಸ್.ಬಿ. ಘಂಟಿ ಇದ್ದರು.
- 31ರಂದು ಅಧಿಕೃತ ಉದ್ಘಾಟನೆ
- ಎಡಿಸಿ ಶೀಲವಂತ ಶಿವಕುಮಾರ್ ಹೇಳಿಕೆ
ದಾವಣಗೆರೆ : ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಮೇ 31ರಂದು ಜಿಲ್ಲೆಯ 7 ಹಳ್ಳಿಗಳನ್ನು ‘ತಂಬಾಕುಮುಕ್ತ ಗ್ರಾಮ’ಗಳೆಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದಡಿ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಾಲಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ದಾವಣಗೆರೆ ತಾಲೂಕಿನ ಒಪ್ಪನಹಳ್ಳಿ, ಒಂಟಿಹಾಳ್, ಉಳುಪಿನಕಟ್ಟೆ, ಸುಲ್ತಾನಿಪುರ, ಹರಿಹರ ತಾಲೂಕಿನ ತಿಮ್ಮಲಾಪುರ, ಹೊನ್ನಾಳಿ ತಾಲೂಕಿನ ಹಟ್ಟಿಹಾಳ್ ಹಾಗೂ ಜಗಳೂರು ತಾಲೂಕಿನ ನರೇನಹಳ್ಳಿ ಗ್ರಾಮಗಳಲ್ಲಿ ತಂಬಾಕು ನಿಯಂತ್ರಣ ನಿಯಮಾವಳಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಗ್ರಾಮಗಳ ಪ್ರವೇಶ ದ್ವಾರದಲ್ಲಿ ‘ತಂಬಾಕುಮುಕ್ತ ಗ್ರಾಮ’ ಎಂಬ ಸ್ವಾಗತ ಫಲಕಗಳನ್ನು ಅಳವಡಿಸಿ, ಸ್ಥಳೀಯರ ಸಮ್ಮುಖದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು. ಉಳಿದ 3 ಗ್ರಾಮಗಳನ್ನು ಜೂನ್ ಅಂತ್ಯದೊಳಗೆ ತಂಬಾಕುಮುಕ್ತವೆಂದು ಘೋಷಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ತಂಬಾಕು ಬಳಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಸಂಪೂರ್ಣ ತಂಬಾಕುಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜೂನ್ ತಿಂಗಳಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ತಂಬಾಕು ಮಾರಾಟ ಮಾಡುವ ಅಂಗಡಿಗಳು ಶಾಲಾ ಕಾಲೇಜುಗಳಿಂದ ಕನಿಷ್ಠ 100 ಮೀಟರ್ ದೂರವಿರಬೇಕು. ಅಂಗಡಿಗಳ ಮುಂದೆ ‘ಇಲ್ಲಿ ಧೂಮಪಾನ ನಿಷೇಧಿಸಲಾಗಿದೆ’ ಮತ್ತು ‘21 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ಮಾಡಲಾಗುವುದಿಲ್ಲ’ ಎಂಬ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಪ್ರಸಕ್ತ ವರ್ಷದಲ್ಲಿ ಈಗಾಗಲೆ 3,700 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸರಾಸರಿ ತಿಂಗಳಿಗೆ 950 ಪ್ರಕರಣಗಳು ದಾಖಲಾಗುತ್ತಿವೆ. ರೈಲ್ವೆ ಸುರಕ್ಷತಾ ಮಂಡಳಿ ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಇಲಾಖೆ ಸಿದ್ಧವಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಬಿ. ಘಂಟಿ, ಡಿಡಿಪಿಯು ಪಳನಿವೇಲು, ಡಿಡಿಪಿಐ ಕೊಟ್ರೇಶ್, ಕಾರಾಗೃಹ ಅಧೀಕ್ಷಕ ಆನಂದ್ ಇದ್ದರು.
ವಿಶೇಷ ತನಿಖಾ ದಳ ರಚನೆ
ಕೋಟ್ಪಾ ಅಡಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತನಿಖಾ ದಳ ರಚಿಸಿ, ವಾರಕ್ಕೆ ಎರಡು ಬಾರಿ ಜಂಟಿ ದಾಳಿ ನಡೆಸಲು ನಿರ್ದೇಶನ ನೀಡಲಾಗಿದೆ ಎಂದು ಶೀಲವಂತ ಶಿವಕುಮಾರ್ ತಿಳಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50 ಹಾಗೂ ಪುರಸಭೆ/ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 25 ತಂಬಾಕು ಮಾರಾಟ ಪರವಾನಗಿಗಳನ್ನು ನೀಡುವ ಗುರಿ ಹೊಂದಲಾಗಿದೆ. ಕಿರಾಣಿ ಅಂಗಡಿಗಳ ಟ್ರೇಡ್ ಲೈಸೆನ್ಸ್ ಜತೆಗೆ ತಂಬಾಕು ಪರವಾನಗಿಯನ್ನು ಕಡ್ಡಾಯವಾಗಿ ಜೋಡಿಸಲು ಸೂಚಿಸಲಾಗಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳನ್ನು ತಂಬಾಕು ಮುಕ್ತಗೊಳಿಸಲು ಹಾಗೂ ವಿದ್ಯಾರ್ಥಿಗಳಿಂದ ತಂಬಾಕು ಮುಕ್ತ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ತಂಬಾಕುಮುಕ್ತ ಶೈಕ್ಷಣಿಕ ಸಂಸ್ಥೆ ಆ್ಯಪ್‌ನಲ್ಲಿ ಕಳೆದ ವರ್ಷ ಜಿಲ್ಲೆಯು ಶೇ. 70ರಷ್ಟು ಪ್ರಗತಿ ಸಾಧಿಸಿದ್ದು, ಈ ವರ್ಷ ಜೂನ್ 30ರೊಳಗಾಗಿ ಜಿಲ್ಲೆಯ ಎಲ್ಲ ಮುಖ್ಯ ಶಿಕ್ಷಕರು ಈ ಆ್ಯಪ್‌ನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡು ಶೇ. 100ರಷ್ಟು ಪ್ರಗತಿ ದಾಖಲಿಸುವಂತೆ ಡಿಡಿಪಿಐಗೆ ಸೂಚಿಸಿದರು. ಇದೇ ವೇಳೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲೂ ಪ್ರತಿಜ್ಞಾವಿಧಿ ಹಮ್ಮಿಕೊಳ್ಳಲು ತಿಳಿಸಲಾಯಿತು.
"
ತಂಬಾಕು ನಿಯಂತ್ರಣ ಕೋಶದ ವತಿಯಿಂದ 63 ಜಂಟಿ ದಾಳಿ ನಡೆಸಿ 1.30 ಲಕ್ಷ ರೂ, ಪೊಲೀಸ್ ಇಲಾಖೆ ವತಿಯಿಂದ 7,105 ಪ್ರಕರಣಗಳಲ್ಲಿ 7.54 ಲಕ್ಷ ರೂ. ಹಾಗೂ ಮಹಾನಗರ ಪಾಲಿಕೆ ವತಿಯಿಂದ 397 ಪ್ರಕರಣಗಳನ್ನು ದಾಖಲಿಸಿ 94,300 ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಸಿ.ಜಿ. ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ 12,653 ವ್ಯಸನಿಗಳನ್ನು ತಪಾಸಣೆ ಒಳಪಡಿಸಲಾಗಿದ್ದು, 5,734 ಜನರಿಗೆ ಕೌನ್ಸೆಲಿಂಗ್ ಮಾಡಲಾಗಿದೆ. ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಮೂಲಕ ಈ ವರ್ಷ 59 ಜನರು ಯಶಸ್ವಿಯಾಗಿ ತಂಬಾಕು ವ್ಯಸನದಿಂದ ಮುಕ್ತರಾಗಿದ್ದಾರೆ.
— ಡಾ. ಜಿ.ಡಿ. ರಾಘವನ್, ಜಿಲ್ಲಾ ಸರ್ವೆಕ್ಷಣಾಧಿಕಾರಿ