ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್  
ದಾವಣಗೆರೆ

ಆಟೋಮೊಬೈಲ್ ಕ್ಷೇತ್ರದಲ್ಲಿ 67,820 ಉದ್ಯೋಗ ಸೃಷ್ಟಿ

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ. ಪ್ರಭಾ ಪ್ರಶ್ನೆಗೆ ಕೇಂದ್ರದ ಲಿಖಿತ ಪ್ರತಿಕ್ರಿಯೆ
  • 10 ಕೈಗಾರಿಕಾ ಕೇಂದ್ರ ಸ್ಥಾಪನೆಗೆ ಅನುಮೋದನೆ
  • ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಬೆಂಬಲ
ದಾವಣಗೆರೆ: ಪಿಎಲ್‌ಐ-ಆಟೊ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಸೇರಿ ಸುಧಾರಿತ ಆಟೋಮೊಬೈಲ್ ತಂತ್ರಜ್ಞಾನ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಇದುವರೆಗೆ 44,326 ಕೋಟಿ ರೂ. ಹೂಡಿಕೆಯಾಗಿ 67,820 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವಾಲಯ ಲಿಖಿತ ಉತ್ತರ ನೀಡಿದೆ.
ದೇಶದ ಭಾರೀ ಕೈಗಾರಿಕಾ ಕ್ಷೇತ್ರದ ಸ್ಪರ್ಧಾತ್ಮಕತೆ, ತಂತ್ರಜ್ಞಾನ ಉನ್ನತೀಕರಣ ಹಾಗೂ ಕರ್ನಾಟಕದಲ್ಲಿ ಸುಧಾರಿತ ಉತ್ಪಾದನಾ ಕ್ಲಸ್ಟರ್‌ಗಳ ಸ್ಥಾಪನೆ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿನಲ್ಲಿ ಕೇಳಿದ ಚುಕ್ಕಿಸಹಿತ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ.
18,100 ಕೋಟಿ ರೂ. ಮೊತ್ತದ ಎಸಿಸಿ ಬ್ಯಾಟರಿ ಪಿಎಲ್‌ಐ ಯೋಜನೆಯಡಿ ದೇಶದಲ್ಲಿ 50 ಗಿಗಾವಾಟ್ ಹವರ್ಸ್‌ ಬ್ಯಾಟರಿ ಉತ್ಪಾದನಾ ಸಾಮರ್ಥ್ಯ ನಿರ್ಮಿಸುವ ಗುರಿ ಇದೆ. ಈವರೆಗೆ 5,180 ಕೋಟಿ ರೂ. ಹೂಡಿಕೆ ಮಾಡಿದ್ದು, 1,277 ನೇರ ಉದ್ಯೋಗಗಳು ಸೃಷ್ಟಿಯಾಗಿವೆ. 10,900 ಕೋಟಿ ರೂ. ವೆಚ್ಚದ ಪಿಎಂ-ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರ, ಟ್ರಕ್, ಬಸ್ ಹಾಗೂ ಆಂಬುಲೆನ್ಸ್ ಉತ್ಪಾದನೆಗೆ ಬೆಂಬಲ ನೀಡಲಾಗುತ್ತಿದ್ದು, ಇವಿ ಚಾರ್ಜಿಂಗ್ ಮೂಲಸೌಕರ್ಯ ಹಾಗೂ ಪರೀಕ್ಷಾ ಕೇಂದ್ರಗಳ ಆಧುನೀಕರಣಕ್ಕೂ ನೆರವು ನೀಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದೆ.
ಕ್ಯಾಪಿಟಲ್ ಗೂಡ್ಸ್ ಸ್ಕೀಮ್ ಎರಡನೇ ಹಂತದಿ ಇಂಡಸ್ಟ್ರಿ 4.0 ಉತ್ತೇಜಿಸಲು 4 ಸ್ಮಾರ್ಟ್ ಕೇಂದ್ರಗಳು ಹಾಗೂ 10 ಕೈಗಾರಿಕಾ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಕೇಂದ್ರ ಯಂತ್ರೋಪಕರಣ ತಂತ್ರಜ್ಞಾನ ಸಂಸ್ಥೆ ಮೂಲಕ ಡಿಜಿಟಲ್ ಉತ್ಪಾದನಾ ತಂತ್ರಜ್ಞಾನ ಅಭಿವೃದ್ಧಿ ಯೋಜನೆಗಳಿಗೂ ಅನುಮೋದನೆ ದೊರೆತಿದೆ ಎಂದು ಸಚಿವಾಲಯ ಹೇಳಿದೆ.
ಇದಲ್ಲದೆ, 7,280 ಕೋಟಿ ಮೊತ್ತದ ಅಪರೂಪದ ಭೂ ಶಾಶ್ವತ ಆಯಸ್ಕಾಂತ ಯೋಜನೆಯಡಿ ದೇಶದಲ್ಲಿ ವಾರ್ಷಿಕ 6ಸಾವಿರ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ನಿರ್ಮಿಸಿ ಸ್ವಾವಲಂಬನೆ ಹಾಗೂ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮೇಕ್ ಇನ್ ಇಂಡಿಯಾ 2.0 ಅಡಿ 15 ಉತ್ಪಾದನಾ ಕ್ಷೇತ್ರಗಳು ಸೇರಿ 27 ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿ, ಎನ್‌ಎಸ್ ಡಬ್ಲುೃಎಸ್, ಐಐಎಲ್‌ಬಿ, ಎನ್‌ಐಪಿ, ಎನ್‌ಎಂಪಿ ಮುಂತಾದ ನೀತಿ ಕ್ರಮಗಳ ಮೂಲಕ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.