ದಾವಣಗೆರೆ ಜಿಲ್ಲಾಡಳಿತ ಭವನ. 
ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 67 ಹೊಸ ಮತಗಟ್ಟೆ

ಪ್ರಮುಖ ಮುಖ್ಯಾಂಶಗಳು

  • ಒಟ್ಟು ಬೂತ್‌ಗಳ ಸಂಖ್ಯೆ 284ಕ್ಕೆ ಏರಿಕೆ
  • ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ
  • ವಿಧಾನಸಭಾ ಉಪ ಚುನಾವಣೆ
ದಾವಣಗೆರೆ : ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಯಬೇಕಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 67 ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಭಾರತ ಚುನಾವಣಾ ಆಯೋಗವು 1200ಕ್ಕೂ ಹೆಚ್ಚು ಮತದಾರರು ಇರುವ ಕಡೆ ಹೊಸ ಮತಗಟ್ಟೆ ರಚಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಈ ಹಿಂದೆ 217 ಮತಗಟ್ಟೆಗಳಿದ್ದವು, 67 ಹೊಸದಾಗಿ ರಚನೆಯಾದ ಮತಗಟ್ಟೆಗಳು ಸೇರಿ ಸಂಖ್ಯೆ ಒಟ್ಟು 284ಕ್ಕೆ ಏರಿಕೆಯಾಗಿದೆ.
ಕ್ಷೇತ್ರದ ಯರಗುಂಟೆ, ಎಸ್‌ಜೆಎಂ ನಗರ, ಹೊಳೆಹೊನ್ನೂರು ತೀಟ, ಕುರುಬರ ಕೇರಿ, ಎಸ್‌ಪಿಎಸ್ ನಗರ, ದೇವರಾಜ ಅರಸು ಬಡಾವಣೆ, ಜಾಲಿನಗರ, ಶಿವಾಲಿ ಚಿತ್ರಮಂದಿರ ರಸ್ತೆ, ಹೊಂಡದ ವೃತ್ತ, ಸಿಬಾರ ರಸ್ತೆ ಇನ್ನಿತರ ಪ್ರದೇಶಗಳಲ್ಲಿ ಹೊಸ ಮತಗಟ್ಟೆಗಳನ್ನು ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಚುನಾವಣಾ ಆಯೋಗವು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ದಿನಾಂಕವನ್ನು ಯಾವಾಗ ಘೋಷಿಸುತ್ತದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿದೆ. ಆದರೆ ಜಿಲ್ಲಾಡಳಿತ ಮಾತ್ರ ಆಯೋಗ ನೀಡಿದ ಸೂಚನೆಯಂತೆ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಇವಿಎಂ ಪರಿಶೀಲನೆ

ವಿಧಾನಸಭಾ ಉಪ ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತ ಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಕಾರ್ಯ ಜ. 5ಕ್ಕೆ ಆರಂಭವಾಗಿದ್ದು ಶುಕ್ರವಾರ ಬಹುತೇಕ ಅಂತಿಮ ಹಂತಕ್ಕೆ ಬಂದಿತ್ತು.
ಮತ ಯಂತ್ರಗಳಲ್ಲಿ ಏನಾದರೂ ದೋಷವಿದೆಯೆ?, ಅವು ಸರಿಯಾಗಿ ಕೆಲಸ ಮಾಡುತ್ತಿವೆಯೆ ಎಂಬುದನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಿ ವಿದ್ಯುನ್ಮಾನ ಮತ ಯಂತ್ರಗಳು ಸುಸ್ಥಿತಿಯಲ್ಲಿವೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ಕರಡು ಮತದಾರರ ಪಟ್ಟಿ

ದಾವಣಗೆರೆ ದಕ್ಷಿಣ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಜ. 3ರಂದು ಪ್ರಕಟಿಸಲಾಗಿದೆ. ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜ. 24 ಕೊನೆಯ ದಿನವಾಗಿದೆ. ಫೆ. 7ರ ಒಳಗಾಗಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲಾಗುವುದು. ಫೆ. 14ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.