ದಾವಣಗೆರೆ ವಿವಿ ಕುಲಪತಿ ಡಾ.ಬಿ.ಇ. ರಂಗಸ್ವಾಮಿ  
ದಾವಣಗೆರೆ

ಈ ಬಾರಿ 6 ಹೊಸ ಡಿಪ್ಲೋಮಾ ಕೋರ್ಸ್

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ದಾವಿವಿ ಕುಲಪತಿ ಡಾ. ಬಿ.ಇ. ರಂಗಸ್ವಾಮಿ ಮಾಹಿತಿ
  • ವೃತ್ತಿ ಕೌಶಲದ ಜತೆಗೆ ಸಂಶೋಧನೆಗೂ ಆದ್ಯತೆ
  • ಹಲವು ವಿವಿ ಜತೆ ಸಂಶೋಧನಾ ಒಡಂಬಡಿಕೆ
ದಾವಣಗೆರೆ: ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ನೀಡಿರುವ ದಾವಣಗೆರೆ ವಿಶ್ವವಿದ್ಯಾಲಯವು ಈ ವರ್ಷದಿಂದ ಆರು ಹೊಸ ಪಿಜಿ ಡಿಪ್ಲೋಮಾ ಕೋರ್ಸ್‌ಗಳನ್ನು ಆರಂಭಿಸುತ್ತಿದೆ ಎಂದು ವಿವಿ ಕುಲಪತಿ ಡಾ.ಬಿ.ಇ. ರಂಗಸ್ವಾಮಿ ತಿಳಿಸಿದರು.
ಪಿಜಿ ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ (ಅಪರಾಧಶಾಸತ್ತ ಮತ್ತು ನ್ಯಾಯವಿಜ್ಞಾನ ಅಧ್ಯಯನ ವಿಭಾಗ), ಪಿಜಿ ಡಿಪ್ಲೋಮಾ ಇನ್ ಫೈನಾನ್ಷಿಯಲ್ ಸರ್ವೀಸ್ (ವಾಣಿಜ್ಯ ಶಾಸತ್ತ), ಪಿಜಿ ಡಿಪ್ಲೋಮಾ ಇನ್ ಡೇಟಾ ಅನಾಲೈಸಿಸ್ (ಅರ್ಥಶಾಸತ್ತ), ಪಿಜಿ ಡಿಪ್ಲೋಮಾ ಇನ್ ಫುಡ್ ಪ್ರೊಸೆಸಿಂಗ್, ಸೇಫ್ಟಿ ಆ್ಯಂಡ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ (ಆಹಾರ ತಂತ್ರಜ್ಞಾನ), ಡಿಪ್ಲೊಮಾ ಇನ್ ಯೋಗ (ಯೋಗ ವಿಜ್ಞಾನ) ಮತ್ತು ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ (ಯೋಗ ವಿಜ್ಞಾನ) ಕೋರ್ಸ್ ಶುರುವಾಗಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಲ್ಲದೆ ವಾಣಿಜ್ಯ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಶಿಕ್ಷಣ ವಿಭಾಗದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿವಿಧ ಕೋರ್ಸ್‌ಗಳಲ್ಲಿ ಕೌಶಲ ಆಧಾರಿತ ಪ್ರಾಯೋಗಿಕ ಶಿಕ್ಷಣದ ಸರ್ಟಿಫಿಕೇಟ್ ಮತ್ತು ಪಿಜಿ ಡಿಪ್ಲೋಮಾ ಕೋರ್ಸ್‌ಗಳನ್ನೂ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ವೃತ್ತಿ ಆಧಾರಿತ, ಕೌಶಲ ಹಾಗೂ ಉದ್ಯೋಗ ಸೃಜನೆಯ ಪದವಿಗಳನ್ನು ನೀಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.
ಬದಲಾದ ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕಿದೆ. ಹೀಗಾಗಿ ನಮ್ಮ ಪಠ್ಯಕ್ರಮ 2-3 ವರ್ಷಕ್ಕೆ ಸೀಮಿತವಾಗಬಾರದು. ಕೈಗಾರಿಕಾ ಕಾರ್ಪೋರೇಟ್ ಕ್ಷೇತ್ರದ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಮೌಲ್ಯವರ್ಧನೆಗೆ ವಿವಿ ಸಿದ್ಧವಾಗಿದೆ.
ನಮ್ಮ ಮಕ್ಕಳಿಗೆ ಭವಿಷ್ಯ ಕಟ್ಟಬೇಕಿದೆ. ವಿದ್ಯಾರ್ಥಿಗಳು ಉದ್ಯೋಗ ಅರಸದೆ ಉದ್ಯಮ ಆರಂಭಿಸಿ ಉದ್ಯೋಗದಾತರಾಗಿ ಬೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಈ ಸಂಬಂಧ ಕೆಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳು, ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ವೃತ್ತಿ ಕೌಶಲದ ಜತೆಗೆ ಸಂಶೋಧನೆಗೂ ಆದ್ಯತೆ ನೀಡಲಾಗಿದೆ. ಈಗಾಗಲೇ ವಿವಿಯ ಪ್ರಾಧ್ಯಾಪಕರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ವಿವಿ ಜತೆ ಸಂಶೋಧನಾ ಒಡಂಬಡಿಕೆಯಾಗಿದೆ ಎಂದರು.
ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಒಳಗೊಂಡ ದಾವಣಗೆರೆ ವಿವಿ ವಿದ್ಯಾರ್ಥಿಸ್ನೇಹಿಯಾಗಿದೆ. 129 ಪೂರ್ಣಾವಧಿ ನುರಿತ ಅಧ್ಯಾಪಕರಿದ್ದಾರೆ. ಸುಸಜ್ಜಿತ ಪ್ರಯೋಗಾಲಯಗಳಿದ್ದು, ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಒಟ್ಟು 30 ಸ್ನಾತಕೋತ್ತರ ಪದವಿಗಳಿವೆ. ಹಾಸ್ಟೆಲ್, ಡಿಜಿಟಲ್ ಗ್ರಂಥಾಲಯ, ವೃತ್ತಿ ಮಾರ್ಗದರ್ಶನ ವ್ಯವಸ್ಥೆ ಇದೆ. ಉಳಿದೆಲ್ಲ ವಿವಿಗಳಿಗಿಂತಲೂ ಮುನ್ನವೇ ಪರೀಕ್ಷಾ ಫಲಿತಾಂಶ ನೀಡುತ್ತಿದೆ ಎಂದರು.
ಪ್ರವೇಶಾತಿಗೆ ಅವಧಿ ವಿಸ್ತರಣೆ
ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ದಾವಣಗೆರೆ ವಿಶ್ವವಿದ್ಯಾನಿಲಯವು ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಈಡೇರಿಸುತ್ತಿದೆ. ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳ ಬೇಡಿಕೆಯಂತೆ ಪ್ರವೇಶಾತಿ ಅವಧಿಯನ್ನು ಆಗಸ್ಟ್ 10ರವರೆಗೆ ವಿಸ್ತರಿಸಲಾಗಿದೆ.
ದೂರ ಶಿಕ್ಷಣಕ್ಕೆ ಚಿಂತನೆ
ರೆಗ್ಯುಲರ್ ಪದವಿ ವಂಚಿತರಾದವರಿಗೆ ಮುಂದಿನ ವರ್ಷದಿಂದ ದಾವಿವಿ ವತಿಯಿಂದ ಮುಕ್ತ ಹಾಗೂ ದೂರ ಶಿಕ್ಷಣ ನೀಡುವ ಇರಾದೆ ಇದೆ. ಯುಜಿ ಅಥವಾ ಪಿಜಿ ಹಂತದಿಂದ ಶುರು ಮಾಡಬೇಕೆ ಎಂಬ ಬಗ್ಗೆ ವಿಷಯ ತಜ್ಞರ ಸಮಿತಿ ಮೂಲಕ ನಿರ್ಧರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಥೀಮ್ ಪಾರ್ಕ್ ವಿಹಾರ
ದೃಶ್ಯಕಲಾ ಕಾಲೇಜು ವ್ಯಾಪ್ತಿಯಲ್ಲಿರುವ ಥೀಮ್ ಪಾರ್ಕ್‌ನತ್ತ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನದ ಮಟ್ಟಿಗೆ ಬಂದು ಹೋಗುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ದಾವಿವಿ ವತಿಯಿಂದ ಮನವಿ ಮಾಡಲಾಗುತ್ತಿದೆ ಎಂದೂ ಅವರು ಇರಾದೆ ವ್ಯಕ್ತಪಡಿಸಿದರು.
ಶೀಘ್ರವೇ ಪ್ರಾಚಾರ್ಯರ ಸಭೆ
ದಾವಣಗೆರೆ ವಿವಿಯ ಆರೋಗ್ಯ ಕೆಟ್ಟಿಲ್ಲ. ಇನ್ನಷ್ಟು ಉತ್ತಮವಾಗಿರಬೇಕಿದೆ. ಈ ನಿಟ್ಟಿನಲ್ಲಿ ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪ್ರಾಚಾರ್ಯರ ಸಭೆ ನಡೆಸಲಾಗುತ್ತಿದೆ ಎಂದರು. ವಿವಿಯಲ್ಲಿ ಸರ್ವಜ್ಞ ಹಾಗೂ ಬಾಬು ಜಗಜೀವನರಾಂ ಅಧ್ಯಯನ ಪೀಠಗಳಿದ್ದು ಅದರ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಲಾಗುವುದು ಎಂದು ಹೇಳಿದರು.
ಹಣಕಾಸು ಅಧಿಕಾರಿ ಪ್ರೊ.ಆರ್. ಶಶಿಧರ ಮಾತನಾಡಿ ಕೌಶಲಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ದೇಶಪಾಂಡೆ ಸ್ಕಿಲ್ಸ್ ಜತೆ ಒಪ್ಪಂಡ ಮಾಡಿಕೊಳ್ಳಲಾಗಿದೆ ಎಂದರು.
ಬಿಎ, ಬಿಕಾಂ, ಬಿಎಸ್ಸಿ ಪದವಿಗಳಲ್ಲಿ ಪ್ರತಿ ಸೆಮಿಸ್ಟರ್‌ಗೆ ಅಲ್ಪಾವಧಿಯ ಕೌಶಲಾಭಿವೃದ್ಧಿ, ಅಡ್ವಾನ್ಸ್ ಕೌನ್ಸೆಲಿಂಗ್ ಸ್ಕಿಲ್ಸ್, ಅಡ್ವಾನ್ಸ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್‌ಗೆ ಗಮನ ಹರಿಸಲಾಗಿದೆ. ಅಕ್ಟೋಬರ್ 7ರಿಂದ ಮೂರು ದಿನಗಳ ವಾರ್ಷಿಕ ಸಮ್ಮೇಳನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಎಂ.ಯು. ಲೋಕೇಶ, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ನಿಕಾಯದ ಡೀನ್ ಪ್ರೊ.ಕೆ.ಟಿ.ಶ್ರೀನಿವಾಸ, ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ.ಸತೀಶ್ ವಲ್ಲೇಪುರೆ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶಿವಕುಮಾರ ಕಣಸೋಗಿ ಇದ್ದರು.