ದಾವಣಗೆರೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಶನಿವಾರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಸೂಚನಾ ಫಲಕವನ್ನು ಗಮನಿಸುತ್ತಿರುವುದು. ಪಾಲಕರು ಅವರಿಗೆ ನೆರವಾದರು.
- ಮೊದಲ ದಿನ ಸುಸೂತ್ರ
- ಕನ್ನಡ ಭಾಷಾ ಪರೀಕ್ಷೆ
ದಾವಣಗೆರೆ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನವಾದ ಶನಿವಾರ ನಡೆದ ಕನ್ನಡ ಭಾಷಾ ಪರೀಕ್ಷೆಗೆ 506 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಜಿಲ್ಲೆಯಲ್ಲಿ ಒಟ್ಟು 16942 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 37 ಕೇಂದ್ರಗಳಲ್ಲಿ ನಡೆದ ಕನ್ನಡ ಭಾಷಾ ಪರೀಕ್ಷೆಗೆ 16436 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಕ ಪಳನಿವೇಲು ದೊರೆಸ್ವಾಮಿ ತಿಳಿಸಿದರು.
ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ದೈಹಿಕ ಅಂಗವಿಕಲತೆಯುಳ್ಳ ಮೂವರು ಅಭ್ಯರ್ಥಿಗಳು ಸಹಾಯಕರ ನೆರವಿನಿಂದ ಪರೀಕ್ಷೆ ಬರೆದರು ಎಂದು ಮಾಹಿತಿ ನೀಡಿದರು.
ಪರೀಕ್ಷೆ ಬೆಳಗ್ಗೆ 10 ಗಂಟೆಗೆ ಆರಂಭವಾಯಿತು. ಅದಕ್ಕೂ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದ ಬಳಿ ಇಡಲಾಗಿದ್ದ ಸೂಚನಾ ಫಲಕದಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ನಿಗದಿಯಾದ ಕೊಠಡಿ ಸಂಖ್ಯೆಯನ್ನು ನೋಡಿಕೊಂಡರು. ವಿದ್ಯಾರ್ಥಿಗಳು ತಂದಿದ್ದ ಬ್ಯಾಗ್‌ಗಳನ್ನು ಹೊರಗೆ ಇರಿಸಲಾಗಿತ್ತು.
ವಿದ್ಯಾರ್ಥಿಗಳೊಂದಿಗೆ ಬಂದಿದ್ದ ಪಾಲಕರು ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲಿ ಉಳಿದರು. ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ವಿದ್ಯಾರ್ಥಿಗಳಲ್ಲಿ ಧಾವಂತ ಕಂಡುಬಂದಿತು.
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಲು ಈ ಬಾರಿಯೂ ವೆಬ್‌ಕಾಸ್ಟಿಂಗ್ ನಡೆಯಿತು. ಎಲ್ಲ ಕೊಠಡಿಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪೊಲೀಸರು ಭದ್ರತಾ ವ್ಯವಸ್ಥೆ ನೋಡಿಕೊಂಡರು.