ಹೊನ್ನಾಳಿಯಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಉದ್ಘಾಟಿಸಿದರು. ಡಾ.ರಾಜ್‌ಕುಮಾರ್, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ.ವೀರಣ್ಣ ಪಟ್ಟಣಶೆಟ್ಟಿ, ದಾವಣಗೆರೆಯ ಮಕ್ಕಳ ತಜ್ಞೆ ಸುಧಾ ಸಿ. ಪಾಟೀಲ್, ರಾಜು ವಿ. ಮೋತಿ ಇತರರಿದ್ದರು. Award
- ಸೋಮಣ್ಣ ಎಂ. ಬೇವಿನಮರದ ಹೇಳಿಕೆ
ಹೊನ್ನಾಳಿ: ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ ನೀಡಿದಂತೆ ವೀರವನಿತೆ ಬೆಳವಾಡಿ ಮಲ್ಲಮ್ಮ ಅವರ ಹೆಸರಿನಲ್ಲಿ 5 ಪ್ರಶಸ್ತಿಗಳನ್ನು ಸ್ಥಾಪಿಸಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಎಂ. ಬೇವಿನಮರದ ಹೇಳಿದರು. Award
ಹಿರೇಕಲ್ಮಠದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿ ಇರುವವರು, ನಮ್ಮ ಸಮುದಾಯಕ್ಕೆ ಉತ್ತಮ ಕೆಲಸ ಮಾಡಿದಾಗ ಮಾತ್ರ ನಮ್ಮನ್ನು ಗುರುತಿಸಿ ಪುರಸ್ಕರಿಸುತ್ತದೆ. ಅದನ್ನು ನಾವು ಯಾವಾಗಲೂ ಮರೆಯಬಾರದು ಎಂದರು.
ಸಮುದಾಯದ ಕಡು ಬಡತನದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯಲ್ಲೂ ಸಹಾಯ ಮಾಡಿ, ಇದರ ಜತೆಯಲ್ಲಿ ಸಮಾಜಸವನ್ನು ಸಂಘಟಿಸುವ ಕೆಲಸ ಮರೆಯಬಾರದು ಎಂದು ತಿಳಿಸಿದರು. ವೈದ್ಯ ಡಾ.ರಾಜ್‌ಕುಮಾರ್ ಮಾತನಾಡಿ, ಹೊನ್ನಾಳಿ ತಾಲೂಕು ಪಂಚಮಸಾಲಿ ಸಮಾಜವು ಪಾರದರ್ಶಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮಾಡುವ ಮೂಲಕ ಮುಂಚೂಣಿಯಲ್ಲಿದೆ ಎಂದರು.
ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಆರೋಗ್ಯದತ್ತ ಗಮನಕೊಡಬೇಕು. ಪಾಲಕರು ಮಕ್ಕಳತ್ತ ಗಮನಹರಿಸುವ ಮೂಲಕ ಸರಿದಾರಿಯಲ್ಲಿ ತರುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು ಎಂದರು. ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ.ವೀರಣ್ಣ ಪಟ್ಟಣಶೆಟ್ಟಿ ಮಾತನಾಡಿ, ನಮ್ಮ ಯುವ ಪೀಳಿಗೆಯ ಉನ್ನತ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯ ಸಂಗೀತಾ ಅವರು ಈ ಬಾರಿಯ ಪಿಯುಸಿ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದು ಅವರನ್ನು ಇಲ್ಲಿಗೆ ಕರೆಸಿ ಸನ್ಮಾನ ಮಾಡುತ್ತಿರುವುದು ಖುಷಿಕೊಟ್ಟಿದೆ. ನಮ್ಮ ಈ ಕೆಲಸ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಪರಿಣಮಿಸಲಿದೆ. ಅಲ್ಲದೇ ನಮ್ಮ ಸಮಾಜದ ನೂರಾರು ಯುವಕರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ ಕೀರ್ತಿ ನಮ್ಮ ಕಣ್ಣಮುಂದಿದೆ ಎಂದರು.
ದಾವಣಗೆರೆಯ ಮಕ್ಕಳ ತಜ್ಞೆ ಸುಧಾ ಸಿ. ಪಾಟೀಲ್, ರಾಜು ವಿ. ಮೋತಿ ಮಾತನಾಡಿದರು. ಹೊನ್ನಾಳಿಯ ಮೂಳೆ ಮತ್ತು ಕೀಲು ಶಸ್ತ್ರ ಚಿಕಿತ್ಸ ತಜ್ಞ ಡಾ.ದೀಪಕ್ ಬಿ. ಉಪ್ಪಿನ್, ಗೌರವ ಡಾಕ್ಟರೇಟ್ ಪಡೆದ ವೀರಣ್ಣ ಪಟ್ಟಣಶೆಟ್ಟಿ, ಅರ್ಬನ್ ಬ್ಯಾಂಕ್‌ನ ಸಿಇಒ ಆಗಿ ಪದನ್ನೋತಿ ಪಡೆದ ಎಚ್.ಪಿ.ದಿನೇಶ್ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಾಸೋಹದ ದಾನಿಗಳಾದ ಕುಂಕೋದ್ ಸೋಮಶೇಖರಪ್ಪ ಹಾಗೂ ಸಿದ್ದೇಶ್ ನಾಡಿಗ್ ಅವರನ್ನು ಸನ್ಮಾನಿಸಲಾಯಿತು.
ಪ್ರಥಮ ರ‌್ಯಾಂಕ್ ವಿಜೇತೆ ಸಂಗೀತಾ, ಉಪನ್ಯಾಸಕ ಎಚ್.ಬಿ. ಅಶೋಕ್, ನ್ಯಾಮತಿಯ ಚಂದ್ರಶೇಖರ್ ಪೂಜಾರ್, ಶಿಲ್ಪಾ ರಾಜುಗೌಡ್ರು, ಹಾಲೇಶ್ ಕುಂಕೋದ್ ಉಪಸ್ಥಿತರಿದ್ದರು.