ದಾವಣಗೆರೆ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಸೋಮವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಕೆ.ಪಿ. ಮಧುಸೂದನ್, ನಾಗರಾಜ್ ಇದ್ದರು.  
ದಾವಣಗೆರೆ

ಜಿಲ್ಲೆಯಲ್ಲಿ 45,201 ಕ್ವಿಂಟಾಲ್ ರಾಗಿ ಖರೀದಿ

ಪ್ರಮುಖ ಮುಖ್ಯಾಂಶಗಳು

  • 4954 ರೈತರಿಂದ ನೋಂದಣಿ
  • ಜಗಳೂರಿನಲ್ಲಿ ಅತಿ ಹೆಚ್ಚು
ದಾವಣಗೆರೆ : ಜಿಲ್ಲೆಯ 5 ಕಡೆಗಳಲ್ಲಿ ಆರಂಭಿಸಲಾಗಿರುವ ಖರೀದಿ ಕೇಂದ್ರಗಳಲ್ಲಿ ಇದುವರೆಗೆ 1524 ರೈತರಿಂದ 45,201 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ.
ಪ್ರತಿ ಕ್ವಿಂಟಾಲ್‌ಗೆ 4886 ರೂ. ದರದಲ್ಲಿ ರಾಗಿಯನ್ನು ಖರೀದಿಸಲಾಗುತ್ತಿದೆ. ಎಕರೆಗೆ 10 ಕ್ವಿಂಟಾಲ್‌ನಂತೆ ಒಬ್ಬ ರೈತನಿಂದ ಗರಿಷ್ಠ 50 ಕ್ವಿಂಟಾಲ್ ವರೆಗೆ ಖರೀದಿಸಲು ಅವಕಾಶವಿದೆ. ಇದುವರೆಗೆ 22.08 ಕೋಟಿ ರೂ. ಮೌಲ್ಯದ ರಾಗಿಯನ್ನು ಖರೀದಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 4954 ರೈತರು 1.38 ಲಕ್ಷ ಕ್ವಿಂಟಾಲ್ ರಾಗಿಯನ್ನು ಇದುವರೆಗೆ ನೋಂದಣಿ ಮಾಡಿಸಿದ್ದಾರೆ. ಹರಿಹರದಲ್ಲಿ 75 ರೈತರಿಂದ 2015 ಕ್ವಿಂಟಾಲ್, ಚನ್ನಗಿರಿಯಲ್ಲಿ 130 ರೈತರಿಂದ 3809 ಕ್ವಿಂಟಾಲ್, ದಾವಣಗೆರೆಯಲ್ಲಿ 290 ರೈತರಿಂದ 8939 ಕ್ವಿಂಟಾಲ್, ಹೊನ್ನಾಳಿಯಲ್ಲಿ 84 ರೈತರಿಂದ 1587 ಕ್ವಿಂಟಾಲ್, ಜಗಳೂರಿನಲ್ಲಿ ಅತಿ ಹೆಚ್ಚು 945 ರೈತರಿಂದ 28,850 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ.
ನಗರದ ಎಪಿಎಂಸಿ ಆವರಣದಲ್ಲಿರುವ ಖರೀದಿ ಕೇಂದ್ರಕ್ಕೆ ರಾಗಿ ತಂದಿದ್ದ ಆಲೂರು ಗ್ರಾಮದ ರೈತ ನಾಗರಾಜ್ ಮಾತನಾಡಿ, 12 ಎಕರೆ ಪ್ರದೇಶದಲ್ಲಿ ರಾಗಿ ಬೆಳೆದಿದ್ದೇನೆ. 50 ಕ್ವಿಂಟಾಲ್ ಇಲ್ಲಿಗೆ ತಂದಿದ್ದೇನೆ ಎಂದು ತಿಳಿಸಿದರು.
ಚಿಕ್ಕವ್ವನಾಗ್ತಿಹಳ್ಳಿಯ ರೈತ ಕೆಂಚವೀರಪ್ಪ ಎನ್.ಜಿ. ಪ್ರತಿಕ್ರಿಯೆ ನೀಡಿ, 4 ಎಕರೆಯಲ್ಲಿ ರಾಗಿ ಬೆಳೆದಿದ್ದೇನೆ. ಕಟಾವಾಗಿ 3 ತಿಂಗಳಾಗಿದೆ. ಜನವರಿಯಲ್ಲೇ ಖರೀದಿ ಕೇಂದ್ರ ತೆರೆಯಬೇಕಿತ್ತು. ಈಗ ಖರೀದಿಸಿರುವ ರಾಗಿಗೆ ಹಣ ಬೇಗ ಬರುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.

ಡಿಸಿ ಭೇಟಿ, ಪರಿಶೀಲನೆ

ನಗರದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೋಮವಾರ ಭೇಟಿ ನೀಡಿದ್ದರು.
ಈ ವೇಳೆ ಆಹಾರ ಧಾನ್ಯಗಳ ಗುಣಮಟ್ಟ ಮತ್ತು ಖರೀದಿ ಪ್ರಕ್ರಿಯೆಯನ್ನು ಅವರು ಪರಿಶೀಲಿಸಿದರು. ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೆ ಶೇ. 40ರಷ್ಟು ರಾಗಿಯನ್ನು ಖರೀದಿಸಲಾಗಿದೆ. ಮಾ. 31ರ ಒಳಗಾಗಿ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ. ರೈತರಿಗೆ ಇದರಿಂದ ಅನುಕೂಲವಾಗಿದೆ ಎಂದು ತಿಳಿಸಿದರು. 6 ಜನರ ತಂಡವೊಂದನ್ನು ರಚಿಸಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೆ.ಪಿ. ಮಧುಸೂದನ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಇದ್ದರು.