ದಾವಣಗೆರೆ ತಾಲೂಕಿನ ತುರ್ಚಘಟ್ಟದಲ್ಲಿ ನಿರ್ಮಾಣ ಉದ್ದೇಶಿತ ಶ್ರಮಿಕ ವಸತಿ ಶಾಲೆಯ ಶಿಕ್ಷಕರ ವಸತಿಗೃಹಗಳ ನೀಲಿನಕ್ಷೆ.  
ದಾವಣಗೆರೆ

ದಾವಣಗೆರೆಗೆ 4 ಶ್ರಮಿಕ ವಸತಿ ಶಾಲಾ ಭಾಗ್ಯ

ಪ್ರಮುಖ ಮುಖ್ಯಾಂಶಗಳು

  • ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣದ ಸಂಕಲ್ಪ
  • ಕಲ್ಯಾಣ ಮಂಡಳಿಯ ಸೆಸ್ ಹಣವೇ ಮೂಲಾಧಾರ
  • ಮುಂದಿನ ಶೈಕ್ಷಣಿಕ ವರ್ಷಕ್ಕೆ ಚಾಲನೆಗೊಳ್ಳುವ ಇರಾದೆ
ದಾವಣಗೆರೆ: ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಿದಂತೆ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಉಚಿತ ಶಿಕ್ಷಣಕ್ಕಾಗಿ ಕರ್ನಾಟಕದಲ್ಲಿ ಒಟ್ಟು 104 ಶ್ರಮಿಕ ವಸತಿ ಶಾಲೆಗಳು ಮಂಜೂರಾಗಿವೆ. ಈ ಪೈಕಿ 64 ಟೆಂಡರ್ ಪ್ರಕ್ರಿಯೆ ಅಂತ್ಯಗೊಂಡು ಕಟ್ಟಡ ಕಾಮಗಾರಿ ನಡೆಯುತ್ತಿವೆ.
ದಾವಣಗೆರೆ ಜಿಲ್ಲೆಗೆ ಒಟ್ಟು ನಾಲ್ಕು ಶ್ರಮಿಕ ವಸತಿ ಶಾಲೆಗಳು ಮಂಜೂರಾಗಿದ್ದು ಈ ಪೈಕಿ ಒಂದರ ಕಾಮಗಾರಿ ಶುರುವಾಗಿದೆ. ಅಗತ್ಯ ಸೌಲಭ್ಯಗಳೊಂದಿಗೆ ಒಂದೂವರೆ ವರ್ಷದಲ್ಲಿ ಈ ಶಾಲೆಗಳ ಸುಸಜ್ಜಿತ ಕಟ್ಟಡಗಳು ತಲೆ ಎತ್ತಲಿದ್ದು, ಶ್ರಮಿಕರ ಕುಟುಂಬಗಳಲ್ಲಿ ಶಿಕ್ಷಣದ ಹೊರೆ ಇಳಿಸಲಿವೆ.
ಕಾರ್ಮಿಕ ಇಲಾಖೆಯಡಿ ಈ ವಸತಿ ಶಾಲೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಕಟ್ಟಡಗಳ ಸಿವಿಲ್ ಕಾಮಗಾರಿಗೆ ತಲಾ 25 ಕೋಟಿ ರೂ. ಮೀಸಲಿಡಲಾಗಿದೆ. ಇಲಾಖೆಯ ಇಂಜಿನಿಯರ್‌ಗಳು ಕಾಮಗಾರಿಯ ಮೇಲುಸ್ತುವಾರಿ ನಿಭಾಯಿಸಲಿದ್ದಾರೆ.
ಮೊದಲ ಹಂತದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತುರ್ಚಘಟ್ಟ, ಮಾಯಕೊಂಡ ಕ್ಷೇತ್ರದ ಕೊಗ್ಗನೂರು ಗ್ರಾಮದಲ್ಲಿ ವಸತಿ ಶಾಲೆ ಮಂಜೂರಾಗಿ ಎರಡರ ಕಟ್ಟಡ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಟ್ಟಡ ಪೂರ್ಣಗೊಳಿಸಲು 18 ತಿಂಗಳ ಗಡುವು ನೀಡಲಾಗಿದೆ.
ತುರ್ಚಘಟ್ಟದ 7 ಎಕರೆ ಜಾಗ ಗುರುತಿಸಲಾಗಿದ್ದು ಕಂದಾಯ ಇಲಾಖೆಯಿಂದ ಕಾರ್ಮಿಕ ಇಲಾಖೆಗೆ ಹಸ್ತಾಂತರವಾಗಿದ್ದು ಭೂಮಿಪೂಜೆ ಬಳಿಕ ಕಟ್ಟಡ ಕಾಮಗಾರಿ ಕಳೆದೊಂದು ತಿಂಗಳಿಂದ ಶುರುವಾಗಿದೆ. ಕೊಗ್ಗನೂರಲ್ಲಿಯೂ 7ಎಕರೆ ಜಾಗ ಗುರುತಿಸಲ್ಪಟ್ಟಿದ್ದು ಇನ್ನಷ್ಟೇ ಕಾಮಗಾರಿ ಚಾಲನೆ ಆಗಬೇಕಿದೆ.
ಎರಡನೇ ಹಂತದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಸಂತೆಮುದ್ದಾಪುರ ಗ್ರಾಮದಲ್ಲಿ 9ಎಕರೆ 20ಗುಂಟೆ ಜಾಗ ಗುರುತಿಸಲಾಗಿದೆ. ಇನ್ನು 15 ದಿನದಲ್ಲಿ ಉಳಿದ ಪ್ರಕ್ರಿಯೆ ನಡೆಯಲಿದೆ. ಚನ್ನಗಿರಿ ಕ್ಷೇತ್ರಕ್ಕೆ ಮಂಜೂರಾದ ಮತ್ತೊಂದು ವಸತಿ ಶಾಲೆಗೆ 7ರಿಂದ 8 ಎಕರೆಯ ಸರ್ಕಾರಿ ಜಾಗ ಗುರುತಿಸಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ.

1680 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ

ಈ ಶಾಲೆಗಳಲ್ಲಿ ಆರನೇ ತರಗತಿಯಿಂದ ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣ ಕಲ್ಪಿಸುವ ಇರಾದೆ ಇದೆ. ಪ್ರತಿ ತರಗತಿಗೆ 60 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯದಂತೆ ಒಟ್ಟು 420 ಮಕ್ಕಳಿಗೆ ತಲಾ ಶಾಲೆಯಲ್ಲಿ ಓದುವ ಅವಕಾಶ ಸಿಗಲಿದೆ. ಒಟ್ಟು ನಾಲ್ಕು ವಸತಿ ಶಾಲೆಗಳಲ್ಲಿ ಜಿಲ್ಲೆಯ 1680 ಮಕ್ಕಳು ಲಾಭ ಪಡೆಯಬಹುದು.
ಜಿಲ್ಲೆಯಲ್ಲಿ ಈ ಹಿಂದೆ ಗುರುತಿಸಲ್ಪಟ್ಟ 1.98 ಲಕ್ಷ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿದ್ದು, ಇದರಲ್ಲಿ ಸದ್ಯಕ್ಕೆ 73,627 ನೋಂದಾಯಿತರಿದ್ದಾರೆ. ಅವರ ಮಕ್ಕಳಿಗೆ ಪರೀಕ್ಷೆ ಮೂಲಕ ಅಥವಾ ಮೆರಿಟ್ ಮಾನದಂಡದ ಮೇಲೆ ತರಗತಿಗಳಿಗೆ ಆಯ್ಕೆ ಮಾಡಲಾಗುತ್ತದೆಯೇ ಎಂಬುದಿನ್ನೂ ನಿರ್ಧಾರವಾಗಿಲ್ಲ.
ಮುಂದಿನ ಶೈಕ್ಷಣಿಕ ವರ್ಷದ ಮಧ್ಯಂತರದಲ್ಲಿ ಈ ಕಟ್ಟಡಗಳ ಕೆಲಸ ಅಂತಿಮವಾಗುವ ನಿರೀಕ್ಷೆ ಇದೆ. 2028ಕ್ಕೆ ಚುನಾವಣೆಗಳು ಎದುರಾಗುವ ಹಿನ್ನೆಲೆಯಲ್ಲಿ 2026-27ನೇ ವರ್ಷಕ್ಕೆ ಶಾಲೆಗಳನ್ನು ತಾತ್ಕಾಲಿಕವಾಗಿ ಆರಂಭಿಸಬಹುದಾದ ಸಾಧ್ಯತೆಗಳೂ ಹೆಚ್ಚಿವೆ. ಅಷ್ಟೇ ಅಲ್ಲ; ಮೊರಾರ್ಜಿ ದೇಸಾಯಿ ಶಾಲೆಗಳ ಮಾದರಿಯಲ್ಲೇ ಈ ವಿದ್ಯಾಲಯಗಳು ನಡೆಯಲಿವೆಯಾದರೂ ರಾಜ್ಯ ಅಥವಾ ಇತರೆ ಪಠ್ಯಕ್ರಮ ಹೊಂದಲಿದೆ ಎಂಬುದಕ್ಕೆ ಸ್ಪಷ್ಟತೆ ದೊರೆತಿಲ್ಲ.
ಕಟ್ಟಡಗಳ ಕಾಮಗಾರಿ ಪೂರ್ಣವಾದ ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರವಾಗಲಿದ್ದು ಅದರ ಸಂಪೂರ್ಣ ನಿರ್ವಹಣೆಯನ್ನು ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ಸಂಗ್ರಹವಾಗುವ ಸೆಸ್ ಹಣ ಬಳಸಲಿದೆ. ಶಿಕ್ಷಕರು, ಸ್ವಚ್ಛತಾ ಸಿಬ್ಬಂದಿಗೂ ಇದರಿಂದಲೇ ವೇತನ ಪಾವತಿಯಾಗುವ ಇರಾದೆ ಇದೆ.

ಯಾವ ಸೌಲಭ್ಯಗಳು ಇರಲಿವೆ?

ಪ್ರತಿ ವಸತಿ ಶಾಲಾ ಕಟ್ಟಡವು ಜಿ ಪ್ಲಸ್ 1 ಹಂತ ಹೊಂದಿರಲಿದೆ. ಆಟದ ಮೈದಾನ, ತರಗತಿ ಕೊಠಡಿಗಳು, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಗೃಹ ಸಮುಚ್ಛಯ ಹಾಗೂ ಮಲಗುವ ಕೋಣೆ, ಅಕಾಡೆಮಿಕ್ ವಿಭಾಗ, ಅಡುಗೆ ಕೋಣೆ ಹಾಗೂ ಊಟದ ಸಭಾಂಗಣ, ಗ್ರಂಥಾಲಯ, ಶಿಕ್ಷಕರ ವಸತಿಗೃಹಗಳು, ವಿಜ್ಞಾನ ಹಾಗೂ ಕಂಪ್ಯೂಟರ್ ಪ್ರಯೋಗಾಲಯಗಳ ವ್ಯವಸ್ಥೆ ಇರಲಿದೆ.ಕುಡಿವ ನೀರಿನ ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳುವ ಉದ್ದೇಶವಿದೆ. ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಕಟ್ಟಡ ಕಾರ್ಮಿಕರು ಕೆಲಸಕ್ಕಾಗಿ ವಲಸೆ ಹೋಗುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಅವರ ಮಕ್ಕಳು ಶಿಕ್ಷಣ ವಂಚಿತರಾಗುವ ಸಾಧ್ಯತೆ ಇರಲಿದೆ. ಶ್ರಮಿಕ ವಸತಿ ಶಾಲೆಗಳು ಕಾರ್ಯಾರಂಭವಾದಲ್ಲಿ ಈ ಮಕ್ಕಳ ಶಾಲಾ ಡ್ರಾಪೌಟ್ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ.

— ಎಸ್.ಆರ್. ಅರವಿಂದ್, ಜಿಲ್ಲಾ ಕಾರ್ಮಿಕ ಅಧಿಕಾರಿ.