ದಾವಣಗೆರೆ ತಾಲೂಕಿನ ತುರ್ಚಘಟ್ಟದ ನಿರಾಶ್ರಿತರ ಕೇಂದ್ರದ ತಾತ್ಕಾಲಿಕ ಆಸರೆಯಲ್ಲಿರುವ ರವೀಂದ್ರನಾಥ್ ಬಡಾವಣೆಯ ನಿರ್ವಸತಿಗರು
- ಸ್ನಾನಕ್ಕೆ ನಾಲೆಯೇ ಗತಿ! ಮಕ್ಕಳಿಗಿಲ್ಲ ಶಾಲಾ ಹಾಜರಾತಿ
- ನಿರಾಶ್ರಿತರ ಕೇಂದ್ರದಲ್ಲಿ ನಿರ್ವಸತಿಗರ ಗೋಳು
- ನಿರಾಶ್ರಿತರಿಗೆ ಎದುರಾದ ಹಲವು ಸಂಕಟ
ದಾವಣಗೆರೆ: ‘ನಮ್ಗೆ ಸ್ನಾನಕ್ಕೆ ಕತ್ತಲೇ ದಿಕ್ಕು. ಬೆಳಗ್ಗೆ ಒಂದ್ಕಡಿ ಇಬ್ಬನಿ ಬೀಳ್ತಿರುತ್ತೆ, ಚಳಿ ವಾತಾವರಣ ಬೇರೆ. ಇಲ್ಲಿರೋದೊಂದೇ ಟಾಯ್ಲೆಟ್ ರೂಂ. ಬಾತ್‌ರೂಂ ನೀರು ಹೊರ ಹೋಗುತ್ತಿಲ್ಲ. ಹಿಂಗಾಗಿ ಐದು ಗಂಟೆಯೊಳಗೆ ಚಾನಲ್‌ಗಿಳಿದು ವಾಪಸ್ ಬರಬೇಕು. ಇಲ್ಲಾಂದ್ರೆ ರಸ್ತೇಲಿ ಗಂಡಸ್ರು ಅಡ್ಡಾಡ್ತಿರ್ತಾರೆ ಸಾರ್..’
‘ನಾಕು ದಿನ ಊಟ ಕೊಟ್ಟಿರ‌್ಲಿಲ್ಲ. ಮಿನಿಸ್ಟ್ರು ಮನೆಯಿಂದ ಫೋನ್ ಬಂದ್ಮೇಲೆ ಮತ್ತೆ ಕೊಡ್ತಿದಾರೆ. ಇರಾಕೆ ಮನೆ ಇಲ್ಲ. ಬಾಣಂತಿ, ಸಣ್ಣ ಮಕ್ಳನ್ನು ಸಂಬಂಧಿಕರ ಮನೇಲಿಟ್ಟಿದ್ದೇವೆ. ಸ್ವಸಹಾಯ ಸಂಘದೋರು ಹುಡುಕಿಕೊಂಡು ಇಲ್ಗೂ ಬರ್ತಾರೆ, ಕೆಲಸಕ್ಕೆ ಹೋಗದೆ ತಿಂಗಳಾಯ್ತು. ದುಡಿಮೇನೆ ಇಲ್ದೆ ಸಾಲ, ಬಡ್ಡಿ ಕಟ್ಟೋದಾದ್ರೂ ಹೇಗೆ ಸಾರ್, ಮಕ್ಳು ಸ್ಕೂಲ್ಗೆ ಹೋಗಾಕೆ ಇಲ್ಲಿಂದ ಯಾವ ವ್ಯವಸ್ಥೆನೂ ಇಲ್ಲ. ಅವ್ರ ಎಜುಕೇಷನ್ ಕೂಡ ಹಾಳಾಗೇತಿ..’
ಮಕ್ಕಳ ಶಿಕ್ಷಣಕ್ಕೂ ತೊಂದರೆ
ಇಲ್ಲಿ ಒಟ್ಟು 10ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ನಿರಾಶ್ರಿತರ ಕೇಂದ್ರದಿಂದ ಬಸ್ ಇತರೆ ವಾಹನ ವ್ಯವಸ್ಥೆಗಳಿಲ್ಲ. ಹುಡುಗನೊಬ್ಬ 1 ಕಿಮೀ ದೂರ ನಡೆದು ಶಾಲೆಗೆ ಹೋಗುತ್ತಿದ್ದರೆ ಬಹುತೇಕರು ಶಿಕ್ಷಣ ವಂಚಿತರಾಗಿದ್ದಾರೆ. ಒಂದು ತಿಂಗಳು ಶಾಲೆಗೆ ಹೋಗಲಾಗಲಿಲ್ಲ. ಹಾಜರಾತಿ ಕಡಿಮೆ ಇದೆ ಎಂದು ಶಾಲೆಯವರು ನನಗೆ ಟಿಸಿ ಕೊಟ್ಟು ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಎಸ್ಸೆಸ್ಸೆಲ್ಸಿ ಓದುವ ಪ್ರೀತಂ.
2.5 ಲಕ್ಷ ರೂ. ದಾಟಿದ ಊಟದ ಬಿಲ್!
ತಹಸೀಲ್ದಾರ್ ವಸತಿಗೆ ಸೂಚಿಸಿದ್ದರಿಂದಲೇ ನಿರಾಶ್ರಿತರ ಕೇಂದ್ರದಲ್ಲಿ 40 ದಿನಗಳ ಕಾಲ ನಿವಾಸಿಗಳಿಗೆ ಊಟ ನೀಡಲಾಗಿದೆ. ಇದರ ಮೊತ್ತ 2.5 ಲಕ್ಷ ರೂ. ದಾಟಿದೆ. ಊಟ ನೀಡಲು ತಿಳಿಸಿಲ್ಲ ಎಂದು ತಾಲೂಕು ಆಡಳಿತ ಈಗ ಉಲ್ಟಾ ಹೊಡೆದಿದೆ, ಇದರಿಂದ ಧಾನ್ಯ ಪೂರೈಸುವ ಟೆಂಡರ್‌ದಾರರಿಗೆ ಈ ಮೊತ್ತ ಭರಿಸುವವರು ಯಾರು? ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಕೇಂದ್ರದ ವ್ಯವಸ್ಥಾಪಕರು ಶೀಘ್ರವೇ ಇದರ ಬಿಲ್ ಕ್ಲೇಮಿಗೆ ತಹಸೀಲ್ದಾರ್, ಪಾಲಿಕೆ ಆಯುಕ್ತರ ಬಳಿ ತೆರಳಲಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿಯೊಬ್ಬರು ತಿಳಿಸಿದರು. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಅವರ ತಂಡದ ಪರಿಶೀಲನೆ ಪಟ್ಟಿಯಿಂದ ಈ ಕೇಂದ್ರ ಹೊರಗಿದ್ದುದು ಕೂಡ ಅಚ್ಚರಿಯಾಗಿದೆ.
ರವೀಂದ್ರನಾಥ್ ಬಡಾವಣೆಯಲ್ಲಿ ವಾಸವಿದ್ದ 36 ಕುಟುಂಬಗಳಿಗೆ ತಾಲೂಕು ಆಡಳಿತ, ನಗರಪಾಲಿಕೆ ತುರ್ತಾಗಿ ಪರ್ಯಾಯ ಜಾಗ ಕಲ್ಪಿಸಿ ಹಕ್ಕುಪತ್ರ ಕಲ್ಪಿಸಬೇಕು. ಅಲ್ಲಿಯವರೆಗೂ ಈ ನಿವಾಸಿಗಳಿಗೆ ಊಟ ಕಲ್ಪಿಸಬೇಕು. ಅಧಿಕಾರಿಗಳು ನಿರ್ಲಕ್ಷಿಸಿದರೆ ಈ ಜನರೊಂದಿಗೆ ಧರಣಿ ದಾರಿ ಹಿಡಿಯಬೇಕಾಗುತ್ತದೆ.ಪಾಮೇನಹಳ್ಳಿ ನಾಗರಾಜ್ಪಾಲಿಕೆ ಮಾಜಿ ಸದಸ್ಯ.