ದಾವಣಗೆರೆ : ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ಜಿಲ್ಲಾ ಯೋಗ ಒಕ್ಕೂಟ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಜಿಲ್ಲಾ ಕ್ರೀಡಾಂಗಣದಲ್ಲಿ ಏ. 7ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಯೋಗಾಸನ ಸ್ಪರ್ಧೆ ನಡೆಯಲಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು. ಕ್ರೀಡಾಕೂಟದಲ್ಲಿ ಸಾಂಪ್ರದಾಯಿಕ ಯೋಗಾಸನ ಚಾಂಪಿಯನ್‌ಷಿಪ್ ನಡೆಯಲಿದ್ದು, ಕಲಾತ್ಮಕ ವೈಯಕ್ತಿಕ ಯೋಗಾಸನ ಸ್ಪರ್ಧೆ, ಕಲಾತ್ಮಕ ಜೋಡಿ ಯೋಗಾಸನ ಸ್ಪರ್ಧೆ, ಲಯಬದ್ಧ ಜೋಡಿ ಯೋಗಾಸನ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ಸ್ಪರ್ಧೆಗಳನ್ನು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಸಲಾಗುವುದು. ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ವಿಜೇತರನ್ನು ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಮಾತ್ರ ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ.ಎಸ್. ಒಡೇನಪುರ, ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಡಾ.ಎನ್. ಪರಶುರಾಮ, ಪಾಲಾಕ್ಷಿ, ಡಾ.ಯು.ಸಿದ್ದೇಶ್, ರಾಜು ಬದ್ದಿ, ಜಯಣ್ಣ ಬಾದಾಮಿ, ತೀರ್ಥರಾಜ ಹೋಲೂರು, ಬಾತಿ ಶಂಕರ್, ಚಂದ್ರು, ಪ್ರಕಾಶ್ ಉತ್ತಂಗಿ ಇದ್ದರು.