ಜಿಲ್ಲೆ

ನಿತ್ಯದ ಬದುಕಿನಲ್ಲಿ ಇರಲಿ ಸಕಾರಾತ್ಮಕ ಚಿಂತನೆ

ರಮೇಶ ಜಹಗೀರದಾರ್

ದಾವಣಗೆರೆ : ಪ್ರತಿಯೊಬ್ಬರಿಗೂ ದಿನಕ್ಕೆ 40 ರಿಂದ 80 ಸಾವಿರದ ವರೆಗೆ ಆಲೋಚನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಅದರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಆಯ್ದುಕೊಂಡಾಗ ಮಾತ್ರ ದಿನದ ಬದುಕಿನಲ್ಲಿ ಒತ್ತಡ ಮುಕ್ತರಾಗಿ ಲವಲವಿಕೆಯಿಂದ ಇರಬಹುದು ಎಂದು ಮನಃಶಾಸ್ತ್ರಜ್ಞ  ಡಾ. ಸುಭಾಷ್ ಚಂದ್ರನ್ ಹೇಳಿದರು.
 ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ, ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು  ಸಿಬ್ಬಂದಿಗೆ ಕಾರ್ಯ ಒತ್ತಡ ನಿರ್ವಹಣೆ ಬಗ್ಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ‘ಪೊಲೀಸ್ ಕರ್ತವ್ಯದ ಸಮಯದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಹೇಗೆ ಕಾರ್ಯ ಒತ್ತಡ ನಿರ್ವಹಣೆ ಮಾಡಬೇಕು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
 ಮನುಷ್ಯನಿಗೆ ಮಲಗಿ ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ಅನೇಕ ಚಿಂತನೆಗಳು ಬರುತ್ತವೆ. ಅದರಲ್ಲಿ ಕರ್ತವ್ಯದ ಸ್ಥಳ, ಕುಟುಂಬದ ಮತ್ತು ನೆರೆಹೊರೆಯವರ ಹಾಗೂ ಸಂಬಂಧಿಕರ ಕುರಿತು ಆಲೋಚಗಳು ಮೂಡುತ್ತವೆ. ಅವುಗಳಲ್ಲಿ ಭಾವನಾತ್ಮಕ, ಸಂತೋಷ, ದುಃಖ, ಕರುಣೆ, ಪ್ರೀತಿ, ಭಕ್ತಿ ಸೇರಿ ಅನೇಕ ಭಾವ ವಿಕಾರಗಳು ಮೂಡುತ್ತವೆ ಎಂದು ತಿಳಿಸಿದರು.
 ಅವುಗಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಮಾತ್ರ ಪರಿಗಣಿಸಿ ನಕಾರಾತ್ಮಕ ಚಿಂತನೆಗಳನ್ನು ಕೈಬಿಡಬೇಕು. ಕೆಲವು ಸಂದರ್ಭದಲ್ಲಿ ಮಕ್ಕಳ ಬಗ್ಗೆ ಚಿಂತನೆ ಮಾಡಿ ಇತರೆಯವರಿಗೆ ಹೋಲಿಕೆ ಮಾಡುವುದುಂಟು. ಆದರೆ ಸಾಮರ್ಥ್ಯ ಹೆಚ್ಚಿಸಲು ಏನು ಮಾಡಬೇಕೆಂಬ ಆಲೋಚನೆ ಬಹಳ ಮುಖ್ಯವಾಗಿರುತ್ತದೆ ಎಂದರು.
 ಕೆಲಸ ಮಾಡುವ ಸ್ಥಳಗಳಲ್ಲಿ ಒತ್ತಡಗಳನ್ನು ಸೂಕ್ಷ್ಮತೆಯಿಂದ ನಿರ್ವಹಣೆ ಮಾಡಿದಾಗ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಒಟ್ಟಾರೆ ಸಕಾರಾತ್ಮಕ ಚಿಂತನೆಗಳು ಒತ್ತಡದ ಬದುಕಿನಿಂದ ಹೊರಬರಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಪೊಲೀಸರು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸ್ವಾಸ್ಥೃವೂ ಬಹಳ ಮುಖ್ಯ ಎಂದು ಹೇಳಿದರು.
 ಪೊಲೀಸರು ಕರ್ತವ್ಯದ ಸಮಯದಲ್ಲಿ ದೈಹಿಕ, ಮಾನಸಿಕವಾಗಿ ಹಲವಾರು ಒತ್ತಡಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಜತೆಗೆ ವೈಯಕ್ತಿಕ ಜೀವನವೂ ಬಹು ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅನುಕೂಲವಾಗಲೆಂದು ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
 ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ, ಡಿವೈಎಸ್ಪಿಗಳಾದ ಮಲ್ಲೇಶ್ ದೊಡ್ಡಮನಿ (ದಾವಣಗೆರೆ ನಗರ ಉಪ ವಿಭಾಗ), ಪ್ರಶಾಂತ್ ಸಿದ್ದನಗೌಡರ್ (ದಾವಣಗೆರೆ ಗ್ರಾಮಾಂತರ ಉಪ ವಿಭಾಗ), ಉಜ್ಜನಿಕೊಪ್ಪ (ಚನ್ನಗಿರಿ ಉಪ ವಿಭಾಗ), ರುದ್ರೇಶ್ (ಬೆರಳು ಮುದ್ರೆ ಘಟಕ), ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮೆಹಬೂಬ್, ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.