ಜಿಲ್ಲೆ

ಮಹಿಳೆಯರಿಗೆ ಹೇಮರೆಡ್ಡಿ ಮಲ್ಲಮ್ಮ ಆದರ್ಶ

ರಮೇಶ ಜಹಗೀರದಾರ್

ಹರಿಹರ : ಸಾಂಸಾರಿಕ ಬದುಕಿನಲ್ಲಿ ಎದುರಾಗುವ ಸಂಕಟಗಳಿಗೆ ಪರಿಹಾರ ಪಡೆಯುವ ದೃಷ್ಟಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.  ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ 603ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.  ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಪೂಜಿಸಿ ಸಾಂಸಾರಿಕ ಜೀವನದಲ್ಲಿ ಬಂದಂತಹ ಅಡೆತಡೆಗಳನ್ನು ಎದುರಿಸಿ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದ ಶರಣೆ ಹೇಮರೆಡ್ಡಿ ಮಲ್ಲಮ್ಮ ಇಂದಿಗೂ ಸ್ಮರಣೀಯರು ಎಂದರು.  ಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಲ್ಲಿ ಸ್ತ್ರೀ ಬಳಗದಲ್ಲಿ ಶ್ರೇಷ್ಠರಾಗಿದ್ದರು. ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಯಶೋಗಾಥೆಯನ್ನು ಇಂದಿನ ಪೀಳಿಗೆಗೆ ತಿಳಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.  ಕನ್ನಡ ಉಪನ್ಯಾಸಕಿ ಉಷಾ ಮಾತನಾಡಿ ಮಲ್ಲಮ್ಮ ಅವರ ಸಹಿಷ್ಣುತೆ ಮಹಿಳೆಯರಿಗೆ ಪ್ರೇರಣೆ ನೀಡುತ್ತದೆ. ಮನೆಯನ್ನು ಮುನ್ನಡೆಸುವಲ್ಲಿ ಸ್ತ್ರೀಯರ ಪಾತ್ರ ಬಹುಮುಖ್ಯವಾದುದು. ಹೇಮರೆಡ್ಡಿ ಮಲ್ಲಮ್ಮ ಅವರ ಸಾಧನೆಗಳು ಬದುಕಿನ ರೀತಿಯನ್ನು ತಿಳಿಯುವ ಸುದಿನವಿದು ಎಂದರು.  ಗ್ರೇಡ್- 2 ತಹಸೀಲ್ದಾರ್ ಪುಷ್ಪಾವತಿ, ಹರಿಹರ ತಾಲೂಕು ರೆಡ್ಡಿ ಸಮಾಜದ ಮುಖಂಡರಾದ ಕೊಟ್ರಪ್ಪರೆಡ್ಡಿ, ಹನುಮಂತ ರೆಡ್ಡಿ, ರಂಗಪ್ಪ ರೆಡ್ಡಿ, ನಿಂಗಪ್ಪ ರೆಡ್ಡಿ ಗಿರಿಗೌಡ್ರು, ಬಸಪ್ಪ ರೆಡ್ಡಿ ಮಣಕೂರು, ಮಂಜಪ್ಪ ಬಿದರಿ, ಆನಂದ ರೆಡ್ಡಿ, ಭೂತ ರೆಡ್ಡಿ, ಬಿ.ಟಿ.ತಿಮ್ಮಾರೆಡ್ಡಿ, ಮಲ್ಲಿಕಾರ್ಜುನ ಬಾವಿಕಟ್ಟಿ, ಎ.ಟಿ. ರಮೇಶ್ ರೆಡ್ಡಿ, ಡಾ.ವಿಶ್ವನಾಥ್ ಕುಂದಗೋಳ ಮಠ, ರವಿ ಪ್ರಕಾಶ್, ಎಂ.ಉಮ್ಮಣ್ಣ ಹಾಗೂ ಇತರರಿದ್ದರು.