ಜಿಲ್ಲೆ

ಅಬಲೆಯರ ಬಾಳಲ್ಲಿ ಹೊಸ ಬೆಳಕು

ರಮೇಶ ಜಹಗೀರದಾರ್

ರಮೇಶ ಜಹಗೀರದಾರ್ ದಾವಣಗೆರೆ : ಇಲ್ಲಿನ ರಾಜ್ಯ ಮಹಿಳಾ ನಿಲಯವು ವಿವಿಧೆಡೆಯಿಂದ ಆಶ್ರಯ ಅರಸಿ ಬಂದ ಅಬಲೆಯರ ಪಾಲಿಗೆ ತವರು ಮನೆಯಾಗಿದೆ. ವಿವಿಧ ರೀತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಬಾಳಿಗೆ ಬೆಳಕಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಯ 5 ದಶಕಗಳ ಇತಿಹಾಸದಲ್ಲಿ 43 ನಿವಾಸಿಗಳು ಸಪ್ತಪದಿ ತುಳಿದಿದ್ದಾರೆ. ಈಗ ಇನ್ನೂ ಮೂವರಿಗೆ ಕಂಕಣ ಬಲ ಕೂಡಿಬಂದಿದೆ.  ಇಲ್ಲಿ ನಡೆಯುವ ಮದುವೆಗಳಲ್ಲಿ ಜಿಲ್ಲಾಧಿಕಾರಿಯೇ ವಧುವಿನ ತಂದೆ-ತಾಯಿ ಸ್ಥಾನದಲ್ಲಿ ನಿಂತು ಧಾರೆ ಎರೆಯುವುದು ವಿಶೇಷ. ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ. ಮಹಿಳಾ ನಿಲಯದ ಆವರಣವನ್ನು ತಳಿರು, ತೋರಣ, ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗುತ್ತದೆ. ಚಪ್ಪರವನ್ನೂ ಹಾಕಿಸಲಾಗುತ್ತದೆ.  ಮೆಹೆಂದಿ ಹಾಕುವುದು, ಅರಿಷಿಣ ಹಚ್ಚುವುದು ಸೇರಿದಂತೆ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ವಧು-ವರರಿಗೆ ಬಟ್ಟೆ ತರಲಾಗುತ್ತದೆ. ಪುರೋಹಿತರನ್ನು ಕರೆಸಿ ಶಾಸ್ತ್ರೋಕ್ತವಾಗಿ ಪದ್ಧತಿಗಳನ್ನು ನೆರವೇರಿಸಲಾಗುತ್ತದೆ. ಕೆಲ ವರ್ಷಗಳಿಂದ ಮಂತ್ರ ಮಾಂಗಲ್ಯ ಪದ್ಧತಿಯಂತೆ ವಿವಾಹ ನೆರವೇರಿಸಲಾಗಿದೆ.  ಜಿ.ಪಂ. ಸಿಇಒ, ಎಸ್ಪಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾಗುತ್ತಾರೆ. ಈ ಹಿಂದೆ ಇಲ್ಲಿ ನಿವಾಸಿಗಳಾಗಿದ್ದು ಬದುಕು ಕಟ್ಟಿಕೊಂಡವರು ಸಂಸಾರ ಸಮೇತ ಆಗಮಿಸಿ ನವ ಜೋಡಿಗಳನ್ನು ಹರಸುತ್ತಾರೆ. ಎಲ್ಲರಿಗೂ ಊಟದ ವ್ಯವಸ್ಥೆಯೂ ಆಗಿರುತ್ತದೆ. ಸಂಭ್ರಮ, ಸಡಗರದ ನಡುವೆ ಜೋಡಿಗಳಿಗೆ ಹಾರೈಸಿ ಮಹಿಳಾ ನಿಲಯದಿಂದ ಬೀಳ್ಕೊಡಲಾಗುತ್ತದೆ.  ...