ರಮೇಶ ಜಹಗೀರದಾರ್, ದಾವಣಗೆರೆ
ಭದ್ರಾ ಜಲಾಶಯದಿಂದ ನದಿಗೆ ಹರಿಯಲು ಬಿಟ್ಟಿರುವ ನೀರು ಭಾನುವಾರ ಸಂಜೆ ಹರಿಹರವನ್ನು ತಲುಪಿದೆ. ಇದರೊಂದಿಗೆ ಕಳೆದ 10ಕ್ಕೂ ಹೆಚ್ಚು ದಿನಗಳಿಂದ ಉಂಟಾಗಿದ್ದ ಅಭಾವ ನೀಗಿ ಪರಿಸ್ಥಿತಿಯಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ.
ಹೊಳೆಯ ನೀರನ್ನು ರಾಜನಹಳ್ಳಿಯಿಂದ ಪಂಪ್ ಮಾಡಿ ನಗರಕ್ಕೆ ಸರಬರಾಜು ಮಾಡುವ ಕೆಲಸಕ್ಕೆ ಚಾಲನೆ ದೊರಕಿದೆ. ದೊಡ್ಡಬಾತಿ ಬಳಿ ಶುದ್ಧೀಕರಣ ಮಾಡಿ, ಹಳೇ ದಾವಣಗೆರೆಗೆ ಪೂರೈಸುವ 8 ಓವರ್‌ಹೆಡ್ ಟ್ಯಾಂಕ್‌ಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ಆತಂಕ ಕಳೆದು ಈಗ ಸ್ವಲ್ಪ ಉಸಿರಾಡುವಂತಾಗಿದ್ದು ಮೂರ್ನಾಲ್ಕು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ.
ತುಂಗಭದ್ರಾ ನದಿ ಮತ್ತು ಭದ್ರಾ ನಾಲೆ ಮಹಾನಗರ ಪಾಲಿಕೆಯ ನೀರು ಸರಬರಾಜಿನ ಮೂಲಗಳಾಗಿವೆ. ನಗರದ ಟಿವಿ ಸ್ಟೆಷನ್ ಕೆರೆಯು 1800 ದಶಲಕ್ಷ ಲೀಟರ್ ಸಾಮರ್ಥ್ಯದಿಂದ ಕೂಡಿದ್ದು ಪ್ರಸ್ತುತ ಅದರ ಅರ್ಧದಷ್ಟು (900 ದಶಲಕ್ಷ ಲೀಟರ್) ಪ್ರಮಾಣದ ನೀರು ಮಾತ್ರ ಇದೆ. ಈಗಿರುವ ನೀರನ್ನು 40 ದಿನಗಳ ವರೆಗೆ 20 ವಾರ್ಡ್‌ಗಳಿಗೆ ಪೂರೈಸಬಹುದಾಗಿದೆ.
ಮತ್ತೊಂದು ಪ್ರಮುಖ ಜಲ ಸಂಗ್ರಹಾಗಾರವಾದ ಕುಂದುವಾಡ ಕೆರೆಯು 2400 ದಶಲಕ್ಷ ಲೀಟರ್ ಸಾಮರ್ಥ್ಯ ಹೊಂದಿದ್ದು ಪ್ರಸ್ತುತ 800 ದಶಲಕ್ಷ ಲೀಟರ್ ನೀರು ಮಾತ್ರ ಇದೆ. ಇಲ್ಲಿಂದ ಪೂರ್ತಿ ಹಳೇ ನಗರಕ್ಕೆ ಮತ್ತು ಹೊಸ ಭಾಗದ 5 ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತದೆ.
ಭದ್ರಾ ನಾಲೆಯ ನೀರು ಒಂದೆರಡು ದಿನಗಳಲ್ಲಿ ಸ್ಥಗಿತವಾಗಲಿದೆ. ಏ. 10 ರ ವೇಳೆಗೆ ನದಿಯಲ್ಲಿ ನೀರಿನ ಹರಿವೂ ನಿಲ್ಲಲಿದೆ. ಅಷ್ಟರೊಳಗೆ ಸಾಧ್ಯವಿರುವಷ್ಟು ನೀರನ್ನು ಸಂಗ್ರಹಿಸಬೇಕಿದ್ದು ತಿಂಗಳಾಂತ್ಯದ ವರೆಗೆ ಹೇಗೋ ನಿರ್ವಹಣೆ ಮಾಡಬಹುದು. ಅಷ್ಟರಲ್ಲಿ ಮಳೆಯಾದರೆ ಶುಭ ಸೂಚನೆ. ಇಲ್ಲವಾದರೆ ಮುಂದಿನ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಬಹುದು.
...
* ಟ್ಯಾಂಕರ್‌ಗಳ ಭರಾಟೆ
ನಗರಕ್ಕೆ ಶೇ. 65ರಷ್ಟು ನೀರನ್ನು ತುಂಗಭದ್ರಾ ನದಿಯಿಂದ (ರಾಜನಹಳ್ಳಿ) ಪೂರೈಸಲಾಗುತ್ತದೆ. ಮಾ. 21ಕ್ಕೆ ಹೊಳೆಯಲ್ಲಿ ನೀರಿನ ಹರಿವು ಸ್ಥಗಿತವಾಗಿದ್ದರಿಂದ ದಾವಣಗೆರೆ ಜನರು ನೀರಿನ ಬವಣೆ ಎದುರಿಸುವಂತಾಯಿತು.
ನದಿಯ ನೀರು ಬತ್ತಿ ಹೋಗಿದ್ದರಿಂದ ಮಹಾನಗರ ಪಾಲಿಕೆಯ ಸ್ವಂತದ 6 ಟ್ಯಾಂಕರ್‌ಗಳ ಜತೆಗೆ 10 ಟ್ಯಾಂಕರ್ ಬಾಡಿಗೆ ಪಡೆಯಲಾಯಿತು. ದಿನಕ್ಕೆ 90 ಟ್ಯಾಂಕರ್‌ಗಳ ಮೂಲಕ ಸಾರ್ವಜನಿಕರಿಗೆ ನೀರು ಸರಬರಾಜು ವ್ಯವಸ್ಥೆ ಮಾಡಲಾಯಿತು. ವಾರ್ಡ್‌ಗಳಿಗೆ ಟ್ಯಾಂಕರ್‌ಗಳನ್ನು ಕಳಿಸಲಾಯಿತು. ಒಂದೊಂದು ಟ್ಯಾಂಕರ್‌ಗಳ ಮುಂದೆಯೂ ಕೊಡಗಳ ಸಾಲು ಕಂಡುಬಂದಿತು.
ಪ್ರತಿ ವಾರ್ಡ್‌ಗೆ 3 ಟ್ಯಾಂಕರ್ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ನಗರದಲ್ಲಿ ಕುಡಿಯುವ ನೀರಿನ ಬವಣೆ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ ಬೇಡಿಕೆ ಬಂದಿದೆ. ಕೆಲವು ಟ್ಯಾಂಕರ್ ಮಾಲೀಕರು ಸಿಹಿ ನೀರಾದರೆ ಒಂದು ಟ್ಯಾಂಕರ್‌ಗೆ 1500 ರೂ, ಉಪ್ಪು ನೀರಾದರೆ 1 ಸಾವಿರ ರೂ.ಗೆ ಬೆಲೆ ಏರಿಕೆ ಮಾಡಿದ್ದಾರೆ.
...
* 25 ಹೊಸ ಬೋರ್‌ವೆಲ್
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1081 ಕೊಳವೆಬಾವಿಗಳಿದ್ದು ಅವುಗಳಲ್ಲಿ ಇಳುವರಿ ಕಡಿಮೆಯಾಗಿರುವ 63 ಬೋರ್‌ವೆಲ್‌ಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಇತ್ತೀಚೆಗೆ 25 ಹೊಸ ಕೊಳವೆಬಾವಿಗಳನ್ನು ಕೊರೆಸುವ ಮೂಲಕ ಅವುಗಳಿಂದಲೂ ನೀರೊದಗಿಸಲಾಗುತ್ತಿದೆ.
ಹಳೇ ದಾವಣಗೆರೆಯ ಏಳೆಂಟು ಕಡೆಗಳಲ್ಲಿ ಪಾಲಿಕೆಯ ಬೋರ್‌ವೆಲ್‌ಗಳಿಗೆ ರೀಫಿಲ್ಲಿಂಗ್ ಪಾಯಿಂಟ್‌ಗಳನ್ನು ಮಾಡಲಾಗಿದ್ದು ಅಲ್ಲಿಂದಲೇ ಟ್ಯಾಂಕರ್‌ಗಳಿಗೆ ನೀರು ತುಂಬಿಸಲಾಗುತ್ತಿದೆ. ಹೊಸ ಭಾಗದ ನಾಲ್ಕೈದು ಕಡೆಗಳಲ್ಲೂ ಅದೇ ವ್ಯವಸ್ಥೆ ಮಾಡುವ ಚಿಂತನೆ ಪಾಲಿಕೆಗಿದೆ.
ನೀರಿನ ಅಭಾವ ಇರುವುದರಿಂದ ಮೇ ತಿಂಗಳ ವರೆಗೆ ತನ್ನ ವ್ಯಾಪ್ತಿಯಲ್ಲಿ ಸಾರ್ವಜನಿಕರು ಯಾವುದೇ ಹೊಸ ಕೊಳವೆಬಾವಿ ಕೊರೆಸಲು ಅನುಮತಿ ನೀಡದಿರಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.