ಜಿಲ್ಲೆ

ನದಿ ನೀರು ಹಂಚಿಕೆ ಒಡಂಬಡಿಕೆ ಬಹಿರಂಗಕ್ಕೆ ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ : ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಅಣೆಕಟ್ಟು ಮತ್ತು ವಿಜಯನಗರ ಜಿಲ್ಲೆಯ ತುಂಗಭದ್ರಾ ಅಣೆಕಟ್ಟು ನಿರ್ಮಾಣ ಮಾಡುವಾಗ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಜತೆಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಬಹಿರಂಗಪಡಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹಿಸಿದ್ದಾರೆ.
 ಈ ಕುರಿತು ಅವರು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರ ಮೂಲಕ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ರವಾನಿಸಿದರು.
 ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ ಮಾಡುವಾಗ ಮೈಸೂರು ಮಹಾರಾಜರು, ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆ ಯಾವ ರೀತಿಯ ಒಪ್ಪಂದಗಳಾಗಿವೆ ಎನ್ನುವ ಬಗ್ಗೆ ಇದುವರೆಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
 ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಮಾಡುವಾಗ ಆಂಧ್ರ ಮತ್ತು ಕರ್ನಾಟಕಕ್ಕೆ ನೀರು ಹಂಚಿಕೆ ವಿಷಯದಲ್ಲಿ ಎರಡೂ ರಾಜ್ಯಗಳ ನಡುವೆ ಮೂಲ ಒಪ್ಪಂದಗಳು ಏನಿವೆ ಎಂಬುದು ಈವರೆಗೂ ರಾಜ್ಯದ ಜನರಿಗೆ ಹೆಚ್ಚಾಗಿ ತಿಳಿದಿಲ್ಲ.
 ಈ ವಿಷಯದ ಬಗ್ಗೆ ಪದೇ ಪದೇ ಆಂಧ್ರ ಮತ್ತು ಕರ್ನಾಟಕ, ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆ ದ್ವಂದ್ವ ನೀತಿಗಳು, ರಾಜಕೀಯ ಸಮರಗಳು ತಾರಕಕ್ಕೆ ಏರುವುದರಿಂದ ಮೂರೂ ರಾಜ್ಯಗಳ ಸಾರ್ವಜನಿಕರಿಗೆ ನೋವುಂಟಾಗುತ್ತದೆ ಎಂದು ತಿಳಿಸಿದ್ದಾರೆ.
 ಆದ್ದರಿಂದ ಈ ಎರಡೂ ಅಣೆಕಟ್ಟೆಗಳ ಮೂಲ ಒಪ್ಪಂದದ ಬಗ್ಗೆ ಸರ್ಕಾರ ಕೂಲಂಕಶವಾಗಿ ಚರ್ಚಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ, ಗೊಂದಲಗಳಿಗೆ ತೆರೆ ಎಳೆಯಲು ಸ್ಪಷ್ಟ ಮಾಹಿತಿಯನ್ನು ನೀಡಬೇಕು ಎಂದು ವಿನಂತಿಸಿದ್ದಾರೆ.