ಜಿಲ್ಲೆ

ನೀರು ಪೂರೈಕೆಯಲ್ಲಿ ಬೇಡ ಲೋಪ

ರಮೇಶ ಜಹಗೀರದಾರ್

ದಾವಣಗೆರೆ : ನಗರಕ್ಕೆ ಕುಡಿಯುವ ನೀರು ಒದಗಿಸುವ ಬಾತಿ ಹಾಗೂ ಕುಂದುವಾಡದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್ ನೇತೃತ್ವದ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
 ನೀರು ಪೂರೈಕೆಯಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಲು ಹಾಗೂ ಎರಡೂ ನೀರಿನ ಘಟಕಗಳಲ್ಲಿ ಮೋಟಾರ್ ಸೇರಿ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ಗಮನಕ್ಕೆ ತನ್ನಿ ಎಂದು ಎಂದು ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.
 ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಷನ್ ಕೆರೆಗಳಲ್ಲಿ ಪ್ರಸ್ತುತ ನೀರಿನ ಪ್ರಮಾಣ ಕಡಿಮೆಯಿದೆ. ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿದರೆ ಕೆರೆಗೆ ಬರುತ್ತದೆ. ಕುಂದುವಾಡ ಕೆರೆಯಲ್ಲಿ ಒಂದೂವರೆಯಿಂದ ಎರಡು ಮೀಟರ್ ನೀರು ಸಂಗ್ರಹವಿದೆ. ಭದ್ರಾ ಡ್ಯಾಂ ನೀರು 164 ಅಡಿ ದಾಟಿದ್ದು, ನೀರು ಬಂದರೆ ಯಾವುದೇ ಸಮಸ್ಯೆ ಆಗದು. ಬಾತಿಯಲ್ಲಿ ನೀರು ಸಂಗ್ರಹವಿದ್ದು ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
 ತುಂಗಭದ್ರಾ ನದಿಗೆ ಸಾಕಷ್ಟು ನೀರು ಬಂದಿದೆ. ಪೂರೈಕೆ ಸಂದರ್ಭದಲ್ಲಿ ಎಲ್ಲಿಯೂ ಪೈಪ್ ಒಡೆಯದಂತೆ ಎಚ್ಚರ ವಹಿಸಿ. ಒಂದು ವೇಳೆ ಅಂಥ ಸಂದರ್ಭ ಎದುರಾದರೆ ತಕ್ಷಣ ಸಮಸ್ಯೆಗೆ ಸ್ಪಂದಿಸಿ ನೀರು ಪೋಲಾಗದಂತೆ ನೋಡಿಕೊಳ್ಳಿ ಎಂದರು.
 ಶುದ್ಧ ನೀರಿನ ಘಟಕಗಳ ಕಾರ್ಯಾಚರಣೆಯಲ್ಲಿ  ಸ್ವಲ್ಪ ಸಮಸ್ಯೆ ಉಂಟಾದರೂ ಜನರಿಗೆ ತೊಂದರೆಯಾಗಲಿದೆ. ಕುಡಿಯುವ ನೀರು ಬಹಳ ಮುಖ್ಯ. ಯಾವುದೇ ದೂರು ಬಾರದಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.
 ಭೇಟಿ ವೇಳೆ ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್, ಕಾಂಗ್ರೆಸ್ ಮುಖಂಡರಾದ ಜಗದೀಶ್, ಉಮೇಶ್ ಹಾಗೂ ಎಇಇ ಸಚಿನ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದ್ದರು.