ದಾವಣಗೆರೆ : ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ಉದ್ಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಅಧಿಕಾರಿಗಳು ಎಚ್ಚರ ವಹಿಸಿ ಪರಿಹರಿಸಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದರು. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತೋಳಹುಣಸೆ ಗ್ರಾಮದಲ್ಲಿ ಸೋಮವಾರ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 2021-22ನೇ ಸಾಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಕುರ್ಕಿ ಮತ್ತು ಇತರೆ ಮೂರು ಗ್ರಾಮಗಳಿಗೆ ಡಿಬಿಒಟಿ ಆಧಾರದ ಮೇಲೆ ಕುಡಿಯುವ ನೀರು ಸರಬರಾಜು ಮಾಡುವ 16.37 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಯೋಜನೆಯಡಿ ತೋಳಹುಣಸೆ, ಕುರ್ಕಿ, ಪಾಮೇನಹಳ್ಳಿ, ಚಂದ್ರನಹಳ್ಳಿ, ಬುಳ್ಳಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಈ ಹಿಂದೆ ಮಾಯಕೊಂಡದಲ್ಲಿ ಕೈಗೊಂಡಿದ್ದ ಇದೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯ ಕಂದಗಲ್ಲು ಸೇರಿ ಇತರೆ ಹಳ್ಳಿಗಳಿಗೆ ನೀರು ತಲುಪದೇ ಯೋಜನೆ ವಿಫಲವಾಗಿದೆ ಎಂದು ತಿಳಿಸಿದರು. ಈಗ ತೋಳಹುಣಸೆಯಲ್ಲಿ 16.37 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ವಿಫಲವಾಗದಂತೆ ಎಚ್ಚರ ವಹಿಸಬೇಕು. ಗುತ್ತಿಗೆದಾರರು ಮತ್ತು ಇಂಜಿನಿಯರ್ ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಬೇಕು. ಗ್ರಾಮಸ್ಥರು ಕೂಡ ನಿಗಾ ವಹಿಸಬೇಕು ಎಂದರು. ಸರ್ಕಾರದ ಯೋಜನೆಗಳು ವಿಫಲವಾಗಬಾರದು. ಅವು ಜನರಿಗೆ ಸಂಪೂರ್ಣವಾಗಿ ತಲುಪಿದಾಗ ಮಾತ್ರ ಸರ್ಕಾರದ ಹಣ ಸದ್ವಿನಿಯೋಗ ಆದಂತೆ. ಈ ಹಿಂದೆ ಕ್ಷೇತ್ರದಲ್ಲಿ ಕೈಗೊಂಡಿದ್ದ ಕೋಟ್ಯಂತರ ರೂ. ವೆಚ್ಚದ 22 ಕೆರೆಗಳ ಏತ ನೀರಾವರಿ ಯೋಜನೆ ವಿಫಲವಾಗಿ ಸರ್ಕಾರದ ಹಣ ಪೋಲಾಯಿತು, ಈ ರೀತಿ ಆಗಬಾರದು. ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂದು ಹೇಳಿದರು. ಕ್ಷೇತ್ರದಲ್ಲಿ ರಸ್ತೆಗಳ ಸಮಸ್ಯೆ ಹೆಚ್ಚಾಗಿದೆ. ಮೂಲಸೌಲಭ್ಯಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಸಿಎಂ ಭರವಸೆ ನೀಡಿದ್ದಾರೆ. ರಸ್ತೆಗಳ ಅಭಿವೃದ್ಧಿ ಮೊದಲ ಆದ್ಯತೆಯಾಗಿದೆ. ಇನ್ನೂ ಅನೇಕ ಸಮಸ್ಯೆಗಳಿವೆ. ಹಂತ ಹಂತವಾಗಿ ಪರಿಹರಿಸಲಾಗುವುದು ಎಂದರು. ತೋಳಹುಣಸೆ ಗ್ರಾಪಂ ಅಧ್ಯಕ್ಷೆ ನೀಲಮ್ಮ ಮಂಜಪ್ಪ, ಪಿಡಿಒ ಗೀತಾ, ಕುರ್ಕಿ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಪಿಡಿಒ ಸುರೇಖಾ, ಮಾಜಿ ಅಧ್ಯಕ್ಷೆ ತಾವರಿಬಾಯಿ ಲೋಕ್ಯನಾಯ್ಕ, ವೀರೇಂದ್ರ ಪಾಟೀಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಲೋಹಿತ್, ಇಂಜಿನಿಯರ್ ರಾಜೀವ್, ಗ್ರಾಮದ ಮುಖಂಡರಾದ ಶೇಖರಪ್ಪ, ಅಶೋಕ್, ಓಂಕಾರಪ್ಪ, ಜಯ್ಯಪ್ಪ, ಮಾಯಪ್ಪ, ವೆಂಕಟೇಶ್, ದ್ಯಾಮನಾಯ್ಕ್ ಇದ್ದರು.