ದಾವಣಗೆರೆ : ಮುಂಗಾರು ಹಂಗಾಮು ಭತ್ತದ ಬೆಳೆಗೆ ಆ.1ರಿಂದಲೇ ಭದ್ರಾ ನಾಲೆಗಳಲ್ಲಿ ನೀರು ಹರಿಸಬೇಕು ಎಂದು ಜಿಲ್ಲಾ ರೈತರ ಒಕ್ಕೂಟದ ಸಂಚಾಲಕ ಬಿ.ಎಂ.ಸತೀಶ್ ಕೊಳೇನಹಳ್ಳಿ ಒತ್ತಾಯಿಸಿದರು.
ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. 39348 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದ್ದು, ನೀರಿನ ಮಟ್ಟ 150 ಅಡಿ ತಲುಪಿರುವುದು ಭತ್ತದ ಬೆಳೆಗಾರರಿಗೆ ಸಂತಸ ತಂದಿದೆ. ಭದ್ರಾ ನಾಲೆಗಳಿಗೆ ಸಕಾಲದಲ್ಲಿ ನೀರು ಹರಿಸಿದರೆ ಭತ್ತ ಇಳುವರಿಗೆ ಅನುಕೂಲ ಆಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ಅರ್ಧದಷ್ಟು ರೈತರು ಈಗಾಗಲೇ ಬೇರೆ ಮೂಲಗಳ ನೀರು ಬಳಸಿ ಭತ್ತದ ಸಸಿಮಡಿ ಬೆಳೆಸಿದ್ದಾರೆ. ಇನ್ನುಳಿದ ರೈತರು ನಾಲೆಗಳಿಗೆ ನೀರು ಹರಿಸಿದ ನಂತರ ಸಸಿಮಡಿ ಸಿದ್ದಗೊಳಿಸಲಿದ್ದಾರೆ. ಇದರಿಂದ ಮುಂಗಡ ಸಸಿ ಬೆಳೆಸಿಕೊಂಡವರಿಗೂ ಹಾಗೂ ತಡವಾಗಿ ಸಸಿ ಬೆಳೆಸಿಕೊಳ್ಳುವವರಿಗೂ 2 ತಿಂಗಳ ಅಂತರವಾಗಲಿದೆ. ಮುಂದೆ ಭತ್ತದ ಕಟಾವು ಅವಧಿಯಲ್ಲಿ ಎರಡು ತಿಂಗಳು ಹೆಚ್ಚುವರಿ ನೀರು ಹರಿಸಬೇಕಾಗುತ್ತದೆ. ಹೀಗಾಗಿ ಆ.1 ರಿಂದಲೇ ನೀರು ಹರಿಸಬೇಕು ಎಂದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯು ಸುಮಾರು 2.50 ಲಕ್ಷ ಹೆಕ್ಟೇರ್ ಪ್ರದೇಶ ಒಳಗೊಂಡಿದ್ದು, ಅರ್ಧಕ್ಕಿಂತ ಹೆಚ್ಚು ಭಾಗ ಜಿಲ್ಲೆಯಲ್ಲಿದೆ. ಕಳೆದ ಬಾರಿ ಈ ವೇಳೆಗೆ ಭತ್ತದ ನಾಟಿ ಕಾರ್ಯ ಮಾಡಲಾಗಿತ್ತು. ಆದರೆ ಈ ಬಾರಿ ಕಾಡಾ ಅಧಿಕಾರಿಗಳು ಭತ್ತದ ಬೆಳೆಗೆ ನೀರು ಹರಿಸುವ ಕುರಿತು ಈವರೆಗೂ ಯಾವುದೇ ಸೂಚನೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಶೀಘ್ರ ಕಾಡಾ ಸಭೆ ನಡೆಸಿ ನೀರು ಬಿಡುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಕ್ಕಿ ರಫ್ತು ನಿಷೇಧ ಹಿಂಪಡೆಯಲು ಆಗ್ರಹ:
ಕೇಂದ್ರ ಸರ್ಕಾರ ಬಾಸುಮತಿ ಅಕ್ಕಿ ಹೊರತುಪಡಿಸಿ ಉಳಿದಂತೆ ಎಲ್ಲ ನಮೂನೆಯ ಅಕ್ಕಿ ರಫ್ತು ನಿಷೇಧಿಸಿದ್ದು ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ವಿಶ್ವದ ಅಕ್ಕಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.40 ರಷ್ಟಿದೆ. 2022-23ರಲ್ಲಿ ವಿದೇಶಗಳಿಗೆ 42.12 ಲಕ್ಷ ಟನ್ ಅಕ್ಕಿ ರಫ್ತು ಮಾಡಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ ನಿಗದಿತ ದರದಲ್ಲಿ ದೇಶದ ಜನರಿಗೆ ಅಕ್ಕಿ ಪೂರೈಕೆ ಆಗಬೇಕು ಎಂಬ ಉದ್ದೇಶದಿಂದ ಅಕ್ಕಿ ರಫ್ತು ನಿಷೇಧಿಸಿದ್ದು, ಇದರಿಂದ ಭತ್ತಕ್ಕೆ ಚಿನ್ನದ ಬೆಲೆ ಸಿಗುವ ಅವಕಾಶ ಕೈತಪ್ಪಲಿದೆ ಎಂದು ಹೇಳಿದರು.
ವಿಶ್ವಾದ್ಯಂತ ಪ್ರಸ್ತುತ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಅಕ್ಕಿ ಬೆಲೆ ಹೆಚ್ಚಳವಾಗುವ ಸಂಭವವಿದೆ. ಆದ್ದರಿಂದ ಅಕ್ಕಿ ರಫ್ತು ನಿಷೇಧ ಹಿಂಪಡೆದು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರೈತರ ಒಕ್ಕೂಟದ ಬೆಳವನೂರು ನಾಗೇಶ್ವರರಾವ್, ಎಚ್.ಎನ್.ಗುರುನಾಥ್, ಮಳಲ್ಕೆರೆ ಸದಾನಂದ, ಹೊಸಹಳ್ಳಿ ಶಿವಮೂರ್ತಿ, ಆರನೇಕಲ್ಲು ವಿಜಯಕುಮಾರ್, ತುರ್ಚಘಟ್ಟ ಪುಟ್ಟರಾಜು, ಗೋಣಿವಾಡ ನಾಗರಾಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.