ದಾವಣಗೆರೆ : ಕೆಲಸ ಮಾಡಲು ಮೂಲಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರವು ತಮ್ಮ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿಲ್ಲ, ಬೇಡಿಕೆಗಳನ್ನು ಈಡೇರಿಸಿಲ್ಲ. ಬದಲಾಗಿ ಮುಷ್ಕರ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದೆ. ಆದ್ದರಿಂದ ಕೆಲಸ ಸ್ಥಗಿತಗೊಳಿಸಿ ಹೋರಾಟ ಹಮ್ಮಿಕೊಂಡಿರುವುದಾಗಿ ಮುಷ್ಕರ ನಿರತರು ಹೇಳಿದರು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಟೇಬಲ್, ಕುರ್ಚಿ, ಉತ್ತಮ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್/ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕಾೃನರ್ ನೀಡಬೇಕು ಎಂದು ಆಗ್ರಹಿಸಿದರು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯ ಕಲ್ಪಿಸಬೇಕು. ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್ ನಿಯಮ 160 ರ ಉಪಖಂಡ(2)ನ್ನು ಮರುಸ್ಥಾಪಿಸಬೇಕು ಅಥವಾ ಇತರೆ ಎಲ್ಲ ಇಲಾಖೆಗಳಲ್ಲಿ ಇರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು ಎಂದು ಒತ್ತಾಯಿಸಿದರು. ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು ಎಂದು ಹೇಳಿದರು. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಂಜಿನಪ್ಪ, ಮಂಜುನಾಥ್, ಬಸವರಾಜ, ಪ್ರಭಾಕರ್, ಜಯಶೀಲಾ, ಕರಿಬಸಮ್ಮ, ಶಕುಂತಲಾ ಪಾಲ್ಗೊಂಡಿದ್ದರು.