ದಾವಣಗೆರೆ : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿರುವುದು ದೇಶದ ರಾಜಕಾರಣಕ್ಕೆ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು. ಹರಿಯಾಣ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ವಿಜಯೋತ್ಸವದ ವೇಳೆ ಮಾತನಾಡಿದರು. ದೇಶದಲ್ಲಿ ಬದಲಾವಣೆ ತರುವ ಸಂಕಲ್ಪದೊಂದಿಗೆ ಆ ರಾಜ್ಯದ ಜನರು ಬಿಜೆಪಿಗೆ ಮತ್ತೆ ಬಹುಮತ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ ಮಾತನಾಡಿ, ಮತದಾನೋತ್ತರ ಸಮೀಕ್ಷೆಯ ಫಲಿತಾಂಶಕ್ಕೆ ವ್ಯತಿರಿಕ್ತವಾಗಿ ಫಲಿತಾಂಶ ಬಂದಿದೆ. ಪ್ರಧಾನಿ ಮೋದಿ ಅವರ ಆಡಳಿತದ ಪ್ರಭಾವ ಹಾಗೂ ಹರಿಯಾಣದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅಲ್ಲಿನ ಮತದಾರರು ಸತತ 3ನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು. ಹರಿಯಾಣದ ಫಲಿತಾಂಶ ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರಿದ್ದು ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ಸಿಲುಕಿರುವುದು ಆ ರಾಜ್ಯದ ಚುನಾವಣೆಯ ಮೇಲೆ ಪರಿಣಾಮ ಬೀರಿತು. ಈ ಫಲಿತಾಂಶ ಇತರ ರಾಜ್ಯಗಳಿಗೂ ದಿಕ್ಸೂಚಿ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲಿ ಮಾನಸಿಕ ಸ್ಥೈರ್ಯ ತುಂಬಿದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮುಖಂಡ ಬಿ.ಎಂ. ಸತೀಶ್ ಮಾತನಾಡಿದರು. ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೆಬಾಳ್, ಅನಿಲ್ ನಾಯಕ್, ಅಣ್ಣೇಶ ಐರಣಿ, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್, ಶಿವಾನಂದ ಇದ್ದರು. ... (ಬಾಕ್ಸ್) ವರಿಷ್ಠರ ಗಮನಕ್ಕೆ ಸಿದ್ದೇಶ್ವರ ಹೇಳಿಕೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದನ್ನು ರಾಜ್ಯ ನಾಯಕರ ಗಮನಕ್ಕೆ ತರಲಾಗುವುದು. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಎಸ್.ಎ. ರವೀಂದ್ರನಾಥ್ ಹೇಳಿದರು. ಸಿದ್ದೇಶ್ವರ ರಾಜಕೀಯವಾಗಿ ಹಿರಿಯರಿದ್ದಾರೆ, ಅವರ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಟಾಂಗ್ ಕೊಟ್ಟರು. ಜಿಲ್ಲೆಯಲ್ಲಿ ಬಿಜೆಪಿ ಒಡೆದ ಮನೆಯಾಗಿಲ್ಲ. ಪಕ್ಷದಲ್ಲಿ ಉತ್ಸಾಹಿ ಕಾರ್ಯಕರ್ತರಿದ್ದಾರೆ. ದೇಶದಲ್ಲಿ ಬಿಜೆಪಿ ಬೆಳೆಯಬೇಕು. ರಾಷ್ಟ್ರದ ಜನರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.