ಜಿಲ್ಲೆ

ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬನ್ನಿ

ರಮೇಶ ಜಹಗೀರದಾರ್

ದಾವಣಗೆರೆ  : ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಎಷ್ಟು ಸಾವಿರ ಕೋಟಿ ರೂ. ನೀಡಲಾಗಿದೆ, ಸಿದ್ದರಾಮಯ್ಯ ಸಿಎಂ ಆದ ನಂತರ ನೀಡಿದ ಹಣವೆಷ್ಟು ಎಂಬುದರ ಬಹಿರಂಗ ಚರ್ಚೆಗೆ ಬರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಹ್ವಾನ ನೀಡಿದರು.  ಬಿಜೆಪಿಯಿಂದ ಆಯೋಜಿಸಿದ್ದ ಜನಾಕ್ರೋಶ ಯಾತ್ರೆಯ ಅಂಗವಾಗಿ ನಗರದ ಜಯದೇವ ವೃತ್ತದ ಬಳಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ದರಿದ್ರ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ಸರ್ಕಾರ ಬದುಕಿದ್ದೂ ಸತ್ತಂತಿದೆ ಎಂದು ಹೇಳಿದರು.  ಕಾಂಗ್ರೆಸ್ ತಾನು ನೀಡಿದ್ದ ಭರವಸೆಗಳನ್ನು ಗಾಳಿಗೆ ತೂರಿದೆ. ರೈತರು, ಜನಸಾಮಾನ್ಯರಿಗೆ ಮೋಸ ಮಾಡಿದೆ. ಬೆಲೆ ಏರಿಕೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು.  ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಮಾತನಾಡಿ, ರಾಜ್ಯ ಸರ್ಕಾರ 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಸಮುದ್ರದ ತೆರೆ ಹಾಗೂ ಉಸಿರಾಡುವ ಗಾಳಿಯನ್ನು ಹೊರತುಪಡಿಸಿದರೆ ಎಲ್ಲದಕ್ಕೂ ತೆರಿಗೆ ವಿಧಿಸಿದೆ ಎಂದರು.  ಇದು ಹಗರಣಗಳ ಸರ್ಕಾರ. ಸಿದ್ದರಾಮಯ್ಯ ದಿನಕ್ಕೊಂದು ನಾಟಕವಾಡುತ್ತಿದ್ದಾರೆ. ಅವರ ನಾಟಕದಲ್ಲಿ ಡಿ.ಕೆ. ಶಿವಕುಮಾರ್, ಜಾರಕಿಹೊಳಿ ಸೇರಿ ಹಲವು ನಾಯಕರು ಇದ್ದಾರೆ ಎಂದು ಹೇಳಿದರು.  ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನಾಯಕರು 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈಗ ಅವರ ಆಡಳಿತದಲ್ಲಿ 60 ಪರ್ಸೆಂಟ್ ಆರೋಪ ಕೇಳಿಬಂದಿದೆ. ಇವೆರಡನ್ನೂ ಸೇರಿಸಿ ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.  ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷದವರೇ. ಆದರೆ ಅವರನ್ನು ಸೋಲಿಸಿದ್ದು ಸಾವರ್ಕರ್ ಎಂದು ಕಾಂಗ್ರೆಸ್‌ನ ಕೆಲವರು ಬಿಂಬಿಸಲು ಹೊರಟಿದ್ದಾರೆ. ಅದನ್ನು ನೀವು ಸಾಬೀತು ಮಾಡಿದರೆ ನಾನು ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸ ಸ್ವೀಕರಿಸುತ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು.  ಪಕ್ಷದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ವಿಧಾನ ಪರಿಷತ್ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಎಂ. ಬಸವರಾಜ ನಾಯ್ಕ, ಎಚ್.ಪಿ. ರಾಜೇಶ್, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜೆ. ಅಜಯ ಕುಮಾರ್, ಚಂದ್ರಶೇಖರ ಪೂಜಾರ್ ಇದ್ದರು.