ಜಿಲ್ಲೆ

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವುದು ನಿಲ್ಲಿಸಿ

ದಾವಣಗೆರೆ : ಏಕಾಏಕಿ ಒಕ್ಕಲೆಬ್ಬಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಜಿಲ್ಲಾ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.  ಚಾಮರಾಜ ಪೇಟೆಯಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಮಹಾನಗರ ಪಾಲಿಕೆಗೆ ತೆರಳಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.  ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ಬಾಪೂಜಿ ಆಸ್ಪತ್ರೆಯ ಸುತ್ತಮುತ್ತ, ಬೆಣ್ಣೆ ಮಾರುಕಟ್ಟೆ ಸೇರಿ ನಗರದ ಬೀದಿಬದಿ ಮಾರುಕಟ್ಟೆಗಳನ್ನು ಪಾರಂಪರಿಕ ಮಾರುಕಟ್ಟೆಯನ್ನಾಗಿ ಘೋಷಿಸಿ ಅಭಿವೃದ್ಧಿಪಡಿಸಬೇಕು ಮತ್ತು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಕಾಯ್ದೆ ಹೇಳುತ್ತದೆ.  ಬೀದಿಬದಿ ವ್ಯಾಪಾರದ ಸ್ಥಳಗಳನ್ನು ಒಕ್ಕಲೆಬ್ಬಿಸುವ ಮುನ್ನ ಕಾಯ್ದೆಯ ಅನುಸಾರ ಬಿವಿಸಿ ಸಮಿತಿಯ ಸಭೆಯಲ್ಲಿ ಪರಸ್ಪರ ಒಪ್ಪಿಗೆ ಆಗುವ ಹಾಗೆ ಸುದೀರ್ಘವಾಗಿ ಚರ್ಚಿಸಿ ವೆಂಡಿಂಗ್ ಜೋನ್‌ಗಳನ್ನು ಮಾಡಬೇಕು. ಅವು ಜನನಿಬಿಡ ಪ್ರದೇಶಗಳಾಗಿರಬೇಕು. ಬೀದಿಬದಿ ವ್ಯಾಪಾರಕ್ಕೆ ಸೂಕ್ತವಾಗಿರಬೇಕು ಎಂದು ತಿಳಿಸಿದರು.  ಕಾಯ್ದೆಯಲ್ಲಿ ಸ್ಪಷ್ಟವಾಗಿದ್ದರೂ, ಪಾಲಿಕೆ ಮತ್ತು ಜಿಲ್ಲಾಡಳಿತವು ಬೀದಿಬದಿ ವ್ಯಾಪಾರಸ್ಥರನ್ನು ಏಕಾಏಕಿ ಒಕ್ಕಲೆಬ್ಬಿಸಲು ಹೊರಟಿರುವುದರಿಂದ ಹತ್ತಾರು ದಶಕಗಳಿಂದ ಜೀವನ ಕಟ್ಟಿಕೊಂಡಿರುವ ಬಡವರು ಆಘಾತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಯಾವ ನೀತಿಗಳನ್ನೂ ತಂದಿಲ್ಲ. ನಗರದಲ್ಲಿ ಹತ್ತಿ ಗಿರಣಿಗಳು ಮುಚ್ಚಿದ ಮೆಲೆ ಕೆಲಸ ಕಳೆದುಕೊಂಡ ನಂತರ ಬಹುತೇಕ ಕಾರ್ಮಿಕರು, ಕೋವಿಡ್‌ನಿಂದ ಕೆಲಸ ಕಳೆದುಕೊಂಡ ನೌಕರರು ಮತ್ತು ಬಹಳಷ್ಟು ವಿಧವೆಯರು, ಒಂಟಿ ಹೆಣ್ಣು ಮಕ್ಕಳು ಜೀವನ ನಿರ್ವಹಣೆಗಾಗಿ ಬೀದಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.  ಸಣ್ಣಪುಟ್ಟ ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಜನರನ್ನು ಒಕ್ಕಲೆಬ್ಬಿಸಿದರೆ ಅಥವಾ ವ್ಯಾಪಾರವಿಲ್ಲದ ಸ್ಥಳಗಳಿಗೆ ನೂಕಿ ನಷ್ಟ ಅನುಭವಿಸದರೆ ಅವರಿಗೆ ಪಾಲಿಕೆ ಮತ್ತು ಜಿಲ್ಲಾಡಳಿತ ಪರ್ಯಾಯ ಉದ್ಯೋಗ ನೀಡಲು ಮತ್ತು ನಷ್ಟವನ್ನು ಭರಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು.  ದೊಡ್ಡ ಮಾಲ್‌ಗಳು ಪ್ರವೇಶಿಸಿದ ನಂತರ ಚಿಲ್ಲರೆ ವ್ಯಾಪಾರ ಕುಂಠಿತಗೊಂಡಿದೆ. ಮಾಲ್ಗಳ ಸುತ್ತಮುತ್ತಲಿನ ನೂರಾರು ಚಿಲ್ಲರೆ ವ್ಯಾಪಾರಸ್ಥರು ತೀವ್ರ ಆರ್ಥಿಕ ನಷ್ಟದಲ್ಲಿದ್ದಾರೆ ಎಂದು ಆತಂಕ ತೋಡಿಕೊಂಡರು.  ಮನವಿ ಸ್ವೀಕರಿಸಿದ ಪಾಲಿಕೆಯ ಆಯುಕ್ತೆ ರೇಣುಕಾ, ವ್ಯಾಪಾರಸ್ಥರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿದರು. ಮುಂದೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಟೌನ್ ವೆಂಡಿಂಗ್ ಸಮಿತಿಯ ಸಭೆ ನಡೆಸಿ ಅವರ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದರು.  ಸಂಘದ ಅಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿ ಕೃಷ್ಣಮೂರ್ತಿ, ಕೆ. ಭಾರತಿ, ಮಂಜುನಾಥ ಕೈದಾಳೆ, ಮುಖಂಡರಾದ ಚಂದ್ರಕಾಂತ್, ಅಂಬುಜಮ್ಮ, ಮಂಜುಳಾ ಹರಿಹರ, ಶೀಲಮ್ಮ, ವೀರೇಶ್, ಕಾಯಿ ರಾಮಣ್ಣ ಹಾಗೂ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.