ದಾವಣಗೆರೆ: ಮುಂಬರುವ ದಿನಗಳಲ್ಲಿ ವೀರಶೈವರ ಶಕ್ತಿ ಏನು ಎಂಬುದನ್ನು ತೋರಿಸುವ ಕಾಲ ಬರಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಶ್ರೀಶೈಲ ಮಠದಲ್ಲಿ ಗುರುವಾರ ಮಹಾಸಭಾದ ನಗರ ಮಹಿಳಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಬೇರೆ-ಬೇರೆ ಸಮಾಜದವರೂ ಸಂಘಟಿತರಾಗುತ್ತಿದ್ದಾರೆ. ಸರ್ಕಾರಕ್ಕೆ ಬೆದರಿಕೆ ಹಾಕುವಂತಹ ಘಟನೆಗಳೂ ನಡೆಯುತ್ತಿವೆ.
ಈ ನಡುವೆ ಛಿದ್ರ ಛಿದ್ರವಾಗಿ ಸಂಘಟನೆಯಲ್ಲಿ ಹಿಂದೆ ಬಿದ್ದಿದ್ದ ವೀರಶೈವ ಸಮಾಜವೂ ಸಂಘಟನೆಯಾಗುತ್ತಿದೆ.ಒಳ ಪಂಗಡಗಳನ್ನೆಲ್ಲ ಮರೆತು ನಾವೆಲ್ಲ ಒಂದೇ ಎಂಬ ಭಾವನೆ ಮೂಡುತ್ತಿದೆ ಎಂದರು.
ಸಮಾಜದಲ್ಲಿ ಸಂಘಟನೆಗೆ ಮಹತ್ವವಿದೆ. ಸಂದರ್ಭ ಬಂದಾಗ ಒಗ್ಗಟ್ಟು ಪ್ರದರ್ಶಿಸಿ ನಮ್ಮ ಬಲವನ್ನು ತೋರಿಸೋಣ ಎಂದರು.
ಮುಖ್ಯಮಂತ್ರಿಗಳನ್ನು ನೀಡಿದ ಸಮಾಜ: ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ರಾಜ್ಯದಲ್ಲಿ ವೀರಶೈವ ಸಮಾಜದವರೇ ಬಹಳಷ್ಟು ನಾಯಕರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದಾರೆ, ಆದರೂ ಈ ಸಮಾಜ ಹಿಂದುಳಿದಿರುವುದು ಆಶ್ಚರ್ಯ ಎಂದರು.
ನಗರದ ಶಾಮನೂರು ರಸ್ತೆಯಲ್ಲಿ ಮಹಾಸಭಾಗೆ ದೂಡಾದಿಂದ 10 ಸಾವಿರ ಚದರ ಅಡಿ ಜಾಗ ಮಂಜೂರಾಗಿದೆ. ಅಲ್ಲಿ ನಮ್ಮದೇ ಆದ ಕಟ್ಟಡ ನಿರ್ಮಾಣವಾಗಬೇಕಿದೆ ಎಂದು ತಿಳಿಸಿದರು.
ಮಹಾಸಭಾದ ಮತ್ತೊಬ್ಬ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಮಹಾಸಭಾ ಮತ್ತು ಮಠಾಧೀಶರ ಒತ್ತಡದಿಂದಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ ಎಂದು ಹೇಳಿದರು.
ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಮಹಾಸಭಾ ಕಚೇರಿಗೆ ಬಾಡಿಗೆ ಕಟ್ಟಡ ಹುಡುಕಿದರೆ ಒಂದು ವರ್ಷದ ಬಾಡಿಗೆಯನ್ನು ನೀಡುವುದಾಗಿ ತಿಳಿಸಿದರು.
ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಧಾರ್ಮಿಕ ಆಚಾರ, ವಿಚಾರ, ಸಂಸ್ಕೃತಿ ಕಲಿಸಬೇಕು ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ ಮಾತನಾಡಿ ಪುರಾಣಗಳಲ್ಲಿ ಸ್ತ್ರೀಯರಿಗೆ ಪೂಜನೀಯ ಸ್ಥಾನವಿದೆ. ಆಧುನಿಕ ಯುಗದಲ್ಲಿ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಶರಣರ ವಚನಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್ ತಿಳಿಸಿದರು. ಮಹಾಸಭಾ ಇನ್ನಷ್ಟು ಚುರುಕಾಗಬೇಕು ಎಂದು ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಅಭಿಪ್ರಾಯಪಟ್ಟರು.
ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷೆ ವಿನುತಾ ರವಿ, ನಗರ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ವಾಲಿ, ಪಾಲಿಕೆ ಸದಸ್ಯರಾದ ವೀಣಾ, ಗೌರಮ್ಮ, ಶಿವನಗೌಡ ಪಾಟೀಲ್, ಗಡಿಗುಡಾಳ್ ಮಂಜುನಾಥ್, ಬನ್ನಯ್ಯ ಇದ್ದರು.