ಜಿಲ್ಲೆ

ಬದುಕಿನ ಸವಾಲುಗಳಿಗೆ ಧೈರ್ಯವೇ ಅಸ್ತ್ರ

ರಮೇಶ ಜಹಗೀರದಾರ್

ದಾವಣಗೆರೆ : ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಭವಿಷ್ಯದ ಬದುಕು ಉಜ್ವಲವಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಹೇಳಿದರು.  ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಠಾನದಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಆರಂಭಗೊಂಡ 3 ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.  ಪಾಲಕರು ತಮ್ಮ ಮಕ್ಕಳಿಗೆ ಲಿಂಗ ಭೇದ ಮಾಡದೇ ಶಿಕ್ಷಣ ಕೊಡಿಸಬೇಕು. ತೃತೀಯ ಲಿಂಗಿ ಎಂಬ ಕಾರಣಕ್ಕೆ ಕೌಟುಂಬಿಕ, ಅಥವಾ ಸಾಮಾಜಿಕ ಬಹಿಷ್ಕಾರ ಹಾಕದೇ ಲಿಂಗ ಸಮಾನತೆಯನ್ನು ಎತ್ತಿ ಹಿಡಿಯಬೇಕು ಎಂದರು.  ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ವಾಲ್ಮೀಕಿ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಮಹಿಳೆಯರಿಂದಲೇ ಜಯಂತಿ ಆಚರಿಸಲು ನಿರ್ಧರಿಸಲಾಯಿತು ಎಂದರು.  ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತ ಪುರಸ್ಕೃತೆ ವೀರಾಪುರ ಅಂಜಿನಮ್ಮ, ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿಯ ನಳಿನ ಕಿತ್ತೂರು, ಶೃತಿ, ದೇವರಮನೆ ಮಹೇಶ್, ದಾವಣಗೆರೆ ತಾಪಂ ಮಾಜಿ ಸದಸ್ಯ ಗುಮ್ಮನೂರು ಶಂಭಣ್ಣ, ಉದ್ಯಮಿ ಜ್ಞಾನೇಶ್ವರ್, ರೈತ ಸಂಘದ ಮುಖಂಡರಾದ ಯರವನಾಗತಿಹಳ್ಳಿ ಪರಮೇಶ್ವರಪ್ಪ, ಪಾಮೇನಹಳ್ಳಿ ಗೌಡರ ಶೇಖರಪ್ಪ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೂವಿನ ಮಡು ಹಾಲಪ್ಪ ಇದ್ದರು.  ಇದೇ ವೇಳೆ ಜಾನಪದ ಕಲಾವಿದ ಸಿ.ಎಚ್. ಉಮೇಶ ಅವರಿಗೆ 2024-25 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಕಾರ್ಯಕ್ರಮಕ್ಕೂ ಮುನ್ನ ನಗರದ ಚಾಮರಾಜಪೇಟೆ ವೃತ್ತದಿಂದ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಪದ್ಮಾವತಿ ಅವರು ಚಾಲನೆ ನೀಡಿದರು. ವಿವಿಧ ಜಾನಪದ ಕಲಾ ತಂಡಗಳು ಮೆರುಗು ನೀಡಿದವು.