ದಾವಣಗೆರೆ : ರಾಮಾಯಣದ ಪಾತ್ರಗಳು ಎಲ್ಲರ ಜೀವನವನ್ನು ಪ್ರಭಾವಿಸುತ್ತವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಲ್ಮೀಕಿ ರಾಮಾಯಣದ ಆದರ್ಶಗಳನ್ನು ಜನರು ಮೈಗೂಡಿಸಿಕೊಳ್ಳಬೇಕು. ಆ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಪೊಲೀಸ್ ಭದ್ರತೆಯಲ್ಲಿ ಹಬ್ಬಗಳನ್ನು ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದಲ್ಲಿ ಮಹರ್ಷಿ ವಾಲ್ಮೀಕಿ ಭವನದ ನಿರ್ಮಾಣಕ್ಕೆ 20 ಲಕ್ಷ, ಹೋಬಳಿ ಮತ್ತು ಪಟ್ಟಣ ಪಂಚಾಯಿತಿ ಮಟ್ಟದಲ್ಲಿ 75 ಲಕ್ಷ, ತಾಲೂಕು ಮಟ್ಟದಲ್ಲಿ 200 ಲಕ್ಷ ಮತ್ತು ಜಿಲ್ಲಾ ಮಟ್ಟದಲ್ಲಿ 400 ಲಕ್ಷ ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಪ್ರಥಮ ಹಂತದಲ್ಲಿ 7 ಗ್ರಾಮಗಳಲ್ಲಿ ಮೂಲ ಸೌಕರ್ಯ ಹಾಗೂ ಎಲ್ಲ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದರು. ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಯೋಜನೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮೂಲ ಸೌಕರ್ಯ ಒದಗಿಸಲು ಜಿಲ್ಲೆಯ 44 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ ಎಂದು ಹೇಳಿದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ವಾಲ್ಮೀಕಿ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಲ್ಲ. ಇದನ್ನು ಇಡೀ ಮಾನವ ಕುಲ ಆಚರಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ರಾಮಾಯಣದಲ್ಲಿ ಜೀವನದ ಪಾಠ, ವಿದ್ಯೆ, ಶ್ರದ್ಧೆಯ ಸಂದೇಶವಿದೆ ಎಂದು ಹೇಳಿದರು. ಮೇಯರ್ ಕೆ. ಚಮನ್ ಸಾಬ್, ಪಾಲಿಕೆ ಸದಸ್ಯೆ ಮೀನಾಕ್ಷಿ, ಮುಖಂಡರಾದ ಗಣೇಶ ಹುಲ್ಮನಿ, ಆಂಜನೇಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಎಸ್ಪಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಡಾ. ನವೀನ್ ಸಿ. ಮಠದ್, ವಾಲ್ಮೀಕಿ ಸಮಾಜದ ಮುಖಂಡರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಹೊಂಡದ ವೃತ್ತದಲ್ಲಿರುವ ರಾಜ ವೀರ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಳೆಯಲ್ಲಿಯೇ ಹೊರಟ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ತಲುಪಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 98 ಅಂಕ ಗಳಿಸಿದ ಸೋಮೇಶ್ವರ ವಿದ್ಯಾಲಯದ ವಿದ್ಯಾರ್ಥಿನಿ ವೈ.ಎಂ. ಸೃಜನಾ ಅವರನ್ನು ಸನ್ಮಾನಿಸಲಾಯಿತು.