ಜಿಲ್ಲೆ

ಕಾಲುಬಾಯಿ ಜ್ವರ ಲಸಿಕಾ ಅಭಿಯಾನ

ರಮೇಶ ಜಹಗೀರದಾರ್

ರಮೇಶ ಜಹಗೀರದಾರ್ ದಾವಣಗೆರೆ : ಪಶುಗಳ ಜೀವ ಹಿಂಡುವ ಕಾಲುಬಾಯಿ ಜ್ವರ ಬರದಂತೆ ತಡೆಯಲು ಪಶುಪಾಲನಾ ಇಲಾಖೆಯಿಂದ ಲಸಿಕಾ ಅಭಿಯಾನ ನಡೆಯುತ್ತಿದ್ದು, ಒಂದೂವರೆ ತಿಂಗಳಲ್ಲಿ ಜಿಲ್ಲೆಯ 3,31,814 ಜಾನುವಾರುಗಳನ್ನು ತಲುಪುವ ಗುರಿ ಹೊಂದಲಾಗಿದೆ.  ಏ. 26 ರಿಂದ ಈ ಅಭಿಯಾನ ಆರಂಭವಾಗಿದ್ದು ಜೂ. 9ರ ವರೆಗೆ ನಡೆಯಲಿದೆ. ಇಲಾಖೆಯ ಸಿಬ್ಬಂದಿ, ಕೆ.ಎಂ.ಎಫ್. ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು, ಪಶು ಸಖಿಯರು ಸೇರಿ 320 ಲಸಿಕೆದಾರರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 3 ತಿಂಗಳು ಮೇಲ್ಪಟ್ಟ ದನ, ಎಮ್ಮೆ ಮತ್ತು ಹಂದಿಗಳಿಗೆ ಈ ಲಸಿಕೆ ಹಾಕಲಾಗುತ್ತಿದೆ.  ಜಿಲ್ಲೆಯಲ್ಲಿ 2,37,801 ದನಗಳು, 91,896 ಎಮ್ಮೆ ಹಾಗೂ 2117 ಹಂದಿಗಳಿವೆ ಎಂದು 2019 ರ ಜಾನುವಾರು ಗಣತಿಯ ಅಂಕಿ ಅಂಶಗಳು ಹೇಳುತ್ತವೆ. ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕುವ ಮೂಲಕ ಕಾಲುಬಾಯಿ ಜ್ವರದಿಂದ ಅವುಗಳನ್ನು ಮುಕ್ತಗೊಳಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.  ಕೇಂದ್ರ ಸರ್ಕಾರದ ಯೋಜನೆಯಂತೆ ವರ್ಷದಲ್ಲಿ ಎರಡು ಬಾರಿ ಈ ಲಸಿಕೆ ಹಾಕಲಾಗುತ್ತದೆ. ಇದರಿಂದ ರೋಗವನ್ನು ದೂರವಿಡಲು ಸಾಧ್ಯವಾಗುತ್ತದೆ. ಕಿವಿಯೋಲೆ ಅಳವಡಿಸಿರುವ ರಾಸುಗಳಿಗೆ ಮಾತ್ರ ಲಸಿಕೆಯ ಸೌಲಭ್ಯ ದೊರೆಯಲಿದೆ.  ಲಸಿಕೆದಾರರು ಬೆಳಗ್ಗೆ 6 ಗಂಟೆಯಿಂದ ಮನೆ ಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡುತ್ತಾರೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಈ ಕೆಲಸ ಮುಕ್ತಾಯವಾಗುತ್ತದೆ. ಲಸಿಕೆ ಹಾಕಿದ ಜಾನುವಾರುಗಳ ಬಗ್ಗೆ ಲಸಿಕೆದಾರರು ಭಾರತ್ ಪಶು ಧನ್ ಆ್ಯಪ್‌ನಲ್ಲಿ ದಾಖಲಿಸುತ್ತಾರೆ.  ...