ಜಿಲ್ಲೆ

ಸಂಶೋಧನಾ ಪ್ರಬಂಧ ಪ್ರಕಟಣೆಗೆ ಆದ್ಯತೆ

ರಮೇಶ ಜಹಗೀರದಾರ್

ದಾವಣಗೆರೆ  : ದಾವಣಗೆರೆ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಅವುಗಳ ಮೂಲಕ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಕುಲಪತಿ ಪ್ರೊ. ಬಿ.ಡಿ. ಕುಂಬಾರ ತಿಳಿಸಿದರು.  ವಿವಿ ಆವರಣದಲ್ಲಿ ಬುಧವಾರ ಪ್ರಸಾರಾಂಗ ಕಚೇರಿ ಉದ್ಘಾಟಿಸಿ ಮಾತನಾಡಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ನಡೆಸುವ ಸಂಶೋಧನೆಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಉದ್ದೇಶದಿಂದ ಸಂಶೋಧನಾ ಜರ್ನಲ್ ಆರಂಭಿಸಿ ಪ್ರಕಟಿಸಲು ಆದ್ಯತೆ ನೀಡಲಾಗುವುದು. ಇದಕ್ಕೆ ಪೂರಕವಾದ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು.  ವಿಜ್ಞಾನ, ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ, ಭಾಷೆ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳ ಅಧ್ಯಯನ ಮತ್ತು ಮೌಲ್ಯಯುತ ಸಂಶೋಧನೆಗಳನ್ನು ಗುರುತಿಸಲು ಜರ್ನಲ್‌ಗಳು ಸಹಕಾರಿ ಆಗಲಿವೆ. ವಿದ್ವತ್‌ಪೂರ್ಣ ಸಂಶೋಧನೆಗಳಿಗೆ ಆದ್ಯತೆ ನೀಡುವ ಜತೆಗೆ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ, ಮಾಧ್ಯಮ, ವಾಣಿಜ್ಯ ನಿರ್ವಹಣೆಯ ವಿಷಯಗಳ ಪುಸ್ತಕ ಪ್ರಕಟಣೆಗೂ ಗಮನ ನೀಡಲಾಗುವುದು ಎಂದರು.  ದಾವಣಗೆರೆ ವಿವಿ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ. ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿಶ್ವವಿದ್ಯಾಲಯ ಪ್ರಾಧ್ಯಾಪಕರು ವಿದೇಶಿ ವಿಶ್ವವಿದ್ಯಾಲಯಗಳ ಜತೆಗೂಡಿ ಸಂಶೋಧನೆ ಕೈಗೊಳ್ಳುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ವಿವಿ ಬೆಳವಣಿಗೆಯಲ್ಲಿ ಗಮನಾರ್ಹ ಸಾಧನೆಯಾಗಿದೆ ಎಂದು ತಿಳಿಸಿದರು.  ಕುಲಸಚಿವ ಎಸ್.ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ. ರಮೇಶ್, ಸಿಂಡಿಕೇಟ್ ಸದಸ್ಯರಾದ ಶಾರದಾ ಪಾಟೀಲ, ಡಾ.ಬಿ.ಎನ್. ಉಮೇಶ, ದ್ಯಾಮಪ್ಪ, ಶಬ್ಬೀರ್ ಅಲಿಖಾನ್, ಡಾ.ಎನ್.ಸಿ. ಪ್ರಶಾಂತ್, ಎಚ್. ತಿಪ್ಪೇಸ್ವಾಮಿ, ಎಸ್.ಆರ್. ಉಷಾ, ಡಾ.ಕೆ.ಟಿ. ನಾಗರಾಜ ನಾಯ್ಕ್, ಡಾ. ಟಿ. ಗಿರೀಶ, ಒ. ಬಾಬುಕುಮಾರ್, ಪ್ರೊ.ರವಿಕುಮಾರ ಪಾಟೀಲ, ಪ್ರೊ.ಲೋಕೇಶ್ ಎಂ.ಯು., ಡೀನ್‌ಗಳಾದ ಪ್ರೊ. ಕೆ.ವೆಂಕಟೇಶ್, ಪ್ರೊ.ಎಂ.ಗೋವಿಂದಪ್ಪ, ಪ್ರೊ.ಕೆ.ಟಿ. ಶ್ರೀನಿವಾಸ್ ಇದ್ದರು. ಪ್ರಸಾರಾಂಗ ನಿರ್ದೇಶಕ ಶಿವಕುಮಾರ  ಕಣಸೋಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.