ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಬುಧವಾರ ನಡೆದ, ಎಂ.ಕಾಂ. 4 ನೇ ಸೆಮಿಸ್ಟರ್‌ನ ಬ್ಯುಜಿನೆಸ್ ಅಪ್ಲಿಕೇಶನ್ ಆ್ಯಂಡ್ ಆಪರೇಷನ್ ರಿಸರ್ಚ್ ವಿಷಯದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆಯು ಅಪೂರ್ಣವಾಗಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಆ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 10 ಪ್ರಶ್ನೆಗಳಿದ್ದವು (70 ಅಂಕ). ಪ್ರಶ್ನೆ ಸಂಖ್ಯೆ 5 ರಲ್ಲಿ (ಟೇಬಲ್) ಡಿಮ್ಯಾಂಡ್ ಆ್ಯಂಡ್ ಸಪ್ಲೈ ಕುರಿತಾದ ಒಂದು ಕಾಲಂ ಮತ್ತು ಒಂದು ಸಾಲು ಇರಲಿಲ್ಲ ಎಂದು ತಿಳಿದು ಬಂದಿದೆ. ಈ ವಿಷಯದ ಬಗ್ಗೆ ಬೋರ್ಡ್‌ನವರ ಗಮನಕ್ಕೆ ತರಲಾಗಿದೆ. ಅವರು ಚರ್ಚಿಸಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ವಿದ್ಯಾರ್ಥಿಗಳಿಂದಾಗಲಿ, ಪಾಲಕರಿಂದ ಅಥವಾ ಕಾಲೇಜುಗಳಿಂದ ದೂರು ಬಂದಿಲ್ಲ ಎಂದು, ವಿವಿಯ ಕುಲಸಚಿವ ಪ್ರೊ.ಸಿ.ಕೆ. ರಮೇಶ್ ಪ್ರತಿಕ್ರಿಯೆ ನೀಡಿದರು.