ದಾವಣಗೆರೆ : ಬೀದಿ ಬದಿ ವ್ಯಾಪಾರಸ್ಥರಿಗೆ ಶುಕ್ರವಾರ ಉಚಿತವಾಗಿ ಬೃಹತ್ ಗಾತ್ರದ ಕೊಡೆಗಳನ್ನು ವಿತರಿಸುವ ಮೂಲಕ ರೋಟರಿ ಕ್ಲಬ್ ವಿದ್ಯಾನಗರ ಸಂಸ್ಥೆಯವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ‘ಆರ್ಥಿಕ ಹಾಗೂ ಸಮುದಾಯ ಅಭಿವೃದ್ಧಿ ತತ್ವ’ದನ್ವಯ, ಬೀದಿ ಬದಿಯಲ್ಲಿ ಮಳೆ, ಗಾಳಿ, ಬಿಸಿಲಲ್ಲಿ ಕುಳಿತು ತರಕಾರಿ ಹಾಗೂ ಇತರೆ ವ್ಯಾಪಾರ ಮಾಡುತ್ತಿರುವವರಿಗೆ ಆಸರೆಯಾಗುವ ಮೂಲಕ ಸಂಸ್ಥೆಯು ಮಾದರಿ ಕಾರ್ಯವನ್ನು ಮಾಡಿದೆ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಹಲವಾರು ಆರ್ಥಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಸಹಾಯಗಳನ್ನು ಕ್ಲಬ್ ಪ್ರತಿ ವರ್ಷ ಒದಗಿಸುತ್ತಿದ್ದು ಅವುಗಳಲ್ಲಿ ಕೊಡೆಗಳ ವಿತರಣೆಯೂ ಒಂದು ಸೇವಾ ಕಾರ್ಯವಾಗಿದೆ. ಈ ವರ್ಷ ಸಂಸ್ಥೆಯು ಒಟ್ಟಾರೆ 30 ಸಾವಿರ ರೂಪಾಯಿ ವೆಚ್ಚದಲ್ಲಿ 15 ರಿಂದ 20 ಕೊಡೆಗಳನ್ನು ವಿತರಿಸುವ ಗುರಿ ಹಾಕಿಕೊಂಡಿದ್ದು ಈಗಾಗಲೇ ನಗರದ ವಿವಿಧ ಭಾಗಗಳಲ್ಲಿ 10 ಕೊಡೆಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮದಿಂದ ಬೀದಿಬದಿ ವ್ಯಾಪಾರಿಗಳಿಗೆ ಅವರ ಆರೋಗ್ಯ ಕಾಪಾಡಿಕೊಂಡು ವೃತ್ತಿ ಜೀವನವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದು ಸಂಸ್ಥೆಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೋಟರಿ ಅಧ್ಯಕ್ಷ ಎಸ್.ಎನ್. ಮಳವಳ್ಳಿ, ಕಾರ್ಯದರ್ಶಿ ಆಂಜನೇಯ ಮೂರ್ತಿ, ಖಜಾಂಚಿ ಚಂದ್ರಪ್ಪ, ಉಪ ಗೌರ್ನರ್ ಬಿಲ್ಲಳ್ಳಿ ಹಾಗೂ ರೋಟರಿಯ ಅನೇಕ ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.