ಜಿಲ್ಲೆ

ಬದುಕಿನಲ್ಲಿ ಬೇಕು ಸವಾಲು ಎದುರಿಸುವ ಛಲ

ರಮೇಶ ಜಹಗೀರದಾರ್

ದಾವಣಗೆರೆ : ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಮುಖ್ಯ. ಜೀವನದಲ್ಲಿ ಯಾವುದೇ ಅಡೆತಡೆಗಳು ಬಂದರೂ ಸಮರ್ಥವಾಗಿ ಎದುರಿಸುವ ಛಲವೂ ಇರಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  ಜಿಲ್ಲಾ ಖಾಸಗಿ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮತ್ತು ಜಿಲ್ಲಾ ಪಂಚಾಯಿತಿ, ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ನೂತನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೆಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮ ‘ಸಕ್ಷಮ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.  ಬದುಕಿನಲ್ಲಿ ಏನೇ ಬಂದರೂ ಮುನ್ನುಗ್ಗುವ ಧೈರ್ಯ, ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ಶೇ. 100 ರಷ್ಟು ಶ್ರಮ ಹಾಕಿದಾಗ ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.  ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮುಖ್ಯ, ಈ ನಿಟ್ಟಿನಲ್ಲಿ ಸಕ್ಷಮ ತರಬೇತಿ ಉಪಯುಕ್ತವಾಗಿದೆ. ದೈನಂದಿನ ಚಟುವಟಿಕೆಗಳಲ್ಲಿ ಇಲ್ಲಿ ಕಲಿತುಕೊಂಡ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಸಕ್ಷಮದ ಯಶಸ್ಸು ಅಡಗಿದೆ ಎಂದರು. ಮಕ್ಕಳು ಪರೀಕ್ಷೆ ಬರೆಯುವ ಮುನ್ನ ಮನಸ್ಸನ್ನು ಶಾಂತ ರೀತಿಯಲ್ಲಿ ಇಟ್ಟುಕೊಳ್ಳಬೇಕು, ಆಗ ಅಭ್ಯಾಸ ಮಾಡಿದ ಅಂಶಗಳು ನೆನಪಿನಲ್ಲಿರುತ್ತವೆ ಎಂದು ತಿಳಿಸಿದರು.  ಪರೀಕ್ಷೆ ಸಮೀಪಿಸುತ್ತಿದೆ, ಸಕ್ಷಮದ ಮೂಲಕ ನೀಡಿರುವ ತರಬೇತಿಯನ್ನು ಮನನ ಮಾಡಿಕೊಳ್ಳಬೇಕು. ಚೆನ್ನಾಗಿ ನಿದ್ದೆ ಮಾಡಬೇಕು ಹಾಗೂ ಬೇಸಿಗೆ ಕಾಲವಾದ್ದರಿಂದ ಹೆಚ್ಚು ನೀರು ಕುಡಿಯಬೇಕು. ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.  ಪರೀಕ್ಷೆಯಲ್ಲಿ ಬರವಣಿಗೆ ಉತ್ತಮವಾಗಿರಲಿ. ಜೀವನದಲ್ಲಿ ಒಂದೇ ಗುರಿಯಲ್ಲ, ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧರಾಗಿರಬೇಕು. ಆಶಾವಾದಿಗಳಾಗಿರಬೇಕು. ನಿಮ್ಮ ಶೈಕ್ಷಣಿಕ ಜೀವನದ ನಂತರವೂ ನಿಮ್ಮ ಕಾಲೇಜಿನ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.  ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದ ಸಂಸದೆ, ಮಕ್ಕಳ ಅನಿಸಿಕೆಗಳನ್ನು ಆಲಿಸಿ ಅವರ ಅಭಿಪ್ರಾಯ ಪಡೆದರು. ದಿನಚರಿ ಹಾಗೂ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡರು. ಸಕ್ಷಮದ ಪ್ರಯೋಜನದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಜಿಲ್ಲಾ ಟಾಪರ್‌ಗಳಿಗೆ ಗೌರವಿಸಲಾಯಿತು.  ಜಿಪಂ ಸಿಇಒ ಡಾ. ಸುರೇಶ್ ಬಿ. ಇಟ್ನಾಳ್, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ,  ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್, ನಗರದ ವಿವಿಧ ಕಾಲೇಜುಗಳ ಮುಖ್ಯಸ್ಥರಾದ ಡಾ. ಡಿ.ಎಸ್. ಜಯಂತ್, ವೀರೇಶ್ ಪಟೇಲ್, ಡಾ.ಜಿ.ಎನ್.ಎಚ್. ಕುಮಾರ್, ವೈ.ವಿ. ವಿನಯ್, ಕೆ.ಎಂ. ಮಂಜಪ್ಪ, ಡಾ. ಎ. ತಿಮ್ಮಾರೆಡ್ಡಿ, ಎನ್.ಸಿ. ಪ್ರಶಾಂತ್, ನಾಡಗೌಡರು, ಪ್ರಸಾದ್ ಬಂಗೇರ ಇದ್ದರು.