ಜಿಲ್ಲೆ

ಚಲಿಸುವ ರೈಲಿನಿಂದ ಇಳಿಯುವಾಗ ತಪ್ಪಿದ ಅನಾಹುತ

ರಮೇಶ ಜಹಗೀರದಾರ್

ದಾವಣಗೆರೆ : ನಗರದ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಚಲಿಸುವ ರೈಲಿನಿಂದ ಇಳಿಯಲು ಯತ್ನಿಸಿ ಅಪಾಯಕ್ಕೆ ಸಿಲುಕಲಿದ್ದ ಯುವಕನನ್ನು ಆರ್‌ಪಿಎಫ್ ಸಿಬ್ಬಂದಿಯೊಬ್ಬರು ರಕ್ಷಿಸಿದ್ದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಪ್ರಜ್ವಲ್, ಉದ್ಯೋಗ ಅರಸಿ ದುಗ್ಗಾವತಿ ಗ್ರಾಮದಿಂದ ಬ್ಯಾಡಗಿಗೆ ರೈಲಿನಲ್ಲಿ ಹೋಗಲು ನಿರ್ಧರಿಸಿ ಶನಿವಾರ ದಾವಣಗೆರೆ ರೈಲು ನಿಲ್ದಾಣದಲ್ಲಿ ಇಳಿದಿದ್ದ. ನಗರದಲ್ಲಿ ನಡೆಯುತ್ತಿದ್ದ ಹಿಂದು ಮಹಾಗಣಪತಿ ಶೋಭಾಯಾತ್ರೆ ನೋಡಿಕೊಂಡು ರಾತ್ರಿ ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಮೈಸೂರಿನಿಂದ ಸೊಲ್ಲಾಪುರಕ್ಕೆ ಹೋಗುವ ಗೋಲ್‌ಗುಂಬಜ್ ರೈಲು ರಾತ್ರಿ 11.30 ಕ್ಕೆ ನಿಲ್ದಾಣದ 1ನೇ ಪ್ಲಾಟ್ಫಾರ್ಮ್‌ಗೆ ಆಗಮಿಸಿದೆ. ಸಾಮಾನ್ಯ ಬೋಗಿಯಲ್ಲಿ ಹತ್ತಿದ ಪ್ರಜ್ವಲ್, ಬ್ಯಾಡಗಿಗೆ ನಿಲುಗಡೆ ಇದೆಯೆ ಎಂದು ಒಬ್ಬರನ್ನು ಕೇಳಿದ್ದಾನೆ. ‘ಇಲ್ಲ’ ಎಂಬ ಉತ್ತರ ಬಂದಿದೆ. ಅಷ್ಟರಲ್ಲಿ ರೈಲು ಚಲಿಸಲು ಆರಂಭಿಸಿದೆ. ತಕ್ಷಣವೇ ಪ್ರಜ್ವಲ್ ರೈಲಿನಿಂದ ಜಿಗಿದಿದ್ದಾನೆ. ಇನ್ನೇನು ರೈಲಿನ ಕೆಳಗೆ ಬೀಳುವ ಅಪಾಯವಿದ್ದಾಗ, ಅಲ್ಲೇ ನಿಂತಿದ್ದ ಆರ್‌ಪಿಎಫ್ ಹೆಡ್ ಕಾನ್‌ಸ್ಟೇಬಲ್ ಸತೀಶ್ ಬೆಂಕಿಕೆರೆ ಅವರು ಕ್ಷಣಾರ್ಧದಲ್ಲಿ ಪ್ರಜ್ವಲ್‌ನನ್ನು ಎಳೆದು ಜೀವ ಉಳಿಸಿದ್ದಾರೆ. ಯುವಕನ ಕೈ, ಕಾಲಿಗೆ ಸಣ್ಣ ಪುಟ್ಟ ಗಾಯಗಳಾದವು. ಆಘಾತಕ್ಕೆ ಒಳಗಾಗಿದ್ದ ಪ್ರಜ್ವಲ್‌ನನ್ನು ಕಚೇರಿಗೆ ಕರೆದುಕೊಂಡು ಹೋಗಿ ಉಪಚರಿಸಿದ್ದಾರೆ. ನಂತರ ಬ್ಯಾಡಗಿಗೆ ನಿಲುಗಡೆೆ ಮಾಡುವ ರೈಲಿಗೆ ಹತ್ತಿಸಿ ಕಳುಹಿಸಿದ್ದಾರೆ. ಆದರೆ ಮೊದಲೇ ಆಘಾತಕ್ಕೆ ಒಳಗಾಗಿದ್ದ ಪ್ರಜ್ವಲ್ ಹರಿಹರದಲ್ಲಿ ಇಳಿದು ಸ್ವಗ್ರಾಮಕ್ಕೆ ಮರಳಿದ್ದಾನೆ.