ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರ ಠಾಣೆಯ ಪೊಲೀಸರು ಎಸ್ಪಿ ಉಮಾ ಪ್ರಶಾಂತ, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಿ. ಶರಣಬಸವೇಶ್ವರ ಮಾರ್ಗದರ್ಶನದಲ್ಲಿ, ಸಿಪಿಐ ನಲುವಾಗಲು ಮಂಜುನಾಥ ನೇತೃತ್ವದಲ್ಲಿ ಶಾಲಾ ವಾಹನಗಳ ಪರಿಶೀಲನೆ ನಡೆಸಿದರು. ಒಟ್ಟು 77 ಶಾಲಾ ವಾಹನಗಳನ್ನು ಪರಿಶೀಲನೆ ಮಾಡಲಾಯಿತು. ಅದರಲ್ಲಿ ಹೆಚ್ಚು ಶಾಲಾ ಮಕ್ಕಳನ್ನು ಕೆರೆದೊಯ್ಯುತ್ತಿದ್ದ 38 ವಾಹನದ ಚಾಲಕರ ಮೇಲೆ ಪ್ರಕರಣಗಳನ್ನು ದಾಖಲಿಸಿ 9200 ರೂ. ದಂಡ ವಿಧಿಸಿದರು. ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡಿದ 13 ಶಾಲಾ ವಾಹನ ಚಾಲಕರಿಗೆ 6500 ರೂ, ಸಿಗ್ನಲ್ ಜಂಪ್ ಮಾಡಿದ 3 ಪ್ರಕರಣಗಳನ್ನು ದಾಖಲಿಸಿ 1500 ರೂ. ದಂಡ ವಿಧಿಸಲಾಯಿತು. ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಬಿ.ಎಸ್. ಅಣ್ಣಯ್ಯ, ಪೊಲೀಸ್ ಕಾನ್‌ಸ್ಟೇಬಲ್ ಡಿ. ನೂರ್ ಅಹ್ಮದ್, ಹಾಗೂ ಉಮೇಶ ಅಜ್ಜೊಳ ಅವರು ಸಾರ್ವಜನಿಕ ರಸ್ತೆಯಲ್ಲಿ ಮದ್ಯಪಾನ ಮಾಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಎಫ್.ಸಿ ಇಲ್ಲದ ಶಾಲಾ ಬಸ್ಸನ್ನು ಜಪ್ತು ಮಾಡಿ ಮುಂದಿನ ಕ್ರಮ ಜರುಗಿಸಲು ಆರ್.ಟಿ.ಓಗೆ ನೀಡಲಾಯಿತು. ಪಿಎಸ್‌ಐ ಶೈಲಜಾ ಕೆ.ಎನ್, ಮಹಾದೇವ ಭತ್ತೆ, ಜಯಶೀಲಾ, ಎ.ಎಸ್.ಐ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.