ಜಿಲ್ಲೆ

ಸಂಚಾರ ನಿಯಮ ಪಾಲನೆಯಿಂದ ಸುರಕ್ಷತೆ

ರಮೇಶ ಜಹಗೀರದಾರ್

ದಾವಣಗೆರೆ : ವಾಹನ ಚಾಲನೆ ಮಾಡುವ ಬಹಳಷ್ಟು ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಅನುಸರಿಸುತ್ತಿಲ್ಲ ಎನ್ನುವ ದೂರುಗಳಿವೆ. ಕಾನೂನು ಪಾಲನೆ ಮಾಡುವ ಮೂಲಕ ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
 ಸಾರಿಗೆ ಮತ್ತು ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
 ಕರ್ಕಶ ಧ್ವನಿಯ ಹಾರ್ನ್‌ಗಳ ಬಳಕೆ, ವೀಲಿಂಗ್ ಮಾಡುವುದು, ಹೆಲ್ಮೆಟ್ ಧರಿಸದಿರುವುದು ಹೀಗೆ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ನಿಮಗೂ ಹಾಗೂ ಇತರರಿಗೂ ತೊಂದರೆಯಾಗುತ್ತದೆ ಎಂದು ತಿಳಿಸಿದರು.
 ಹದಿನೆಂಟು ವರ್ಷದ ಒಳಗಿನವರು ವಾಹನಗಳನ್ನು ಓಡಿಸಬಾರದು. ಆಲ್ಕೋಹಾಲ್, ಮಾದಕ ವಸ್ತುಗಳಿಗೆ ದಾಸರಾಗಬಾರದು. ಪರವಾನಗಿ ಪಡೆದುಕೊಂಡ ನಂತರವೇ ವಾಹನ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
 ದೇಶದಲ್ಲಿ 2022 ರಲ್ಲಿ 4.65 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು 1.50 ಲಕ್ಷ ಜನರು ಮೃತಪಟ್ಟಿದ್ದಾರೆ. ಈ ವಿಷಯದಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಶೇ. 72ಕ್ಕೂ ಹೆಚ್ಚು ಅಪಘಾತಗಳು ಅತಿಯಾದ ವೇಗದಿಂದ ಆಗುತ್ತವೆ. ಅವುಗಳಲ್ಲಿ ತೊಂದರೆಗೆ ಒಳಗಾಗುವವರು ಶೇ. 70ಕ್ಕೂ ಹೆಚ್ಚು ಮಂದಿ ಯುವಕರೇ ಆಗಿದ್ದಾರೆ. ಶೇ. 85 ರಿಂದ 90 ರಷ್ಟು ಅಪಘಾತಗಳು ಮನುಷ್ಯನ ತಪ್ಪಿನಿಂದಲೇ ಆಗುತ್ತವೆ ಎಂದರು.
 ಅಪಘಾತ ಸಂಭವಿಸಿ ಯಾರಾದರೂ ತೊಂದರೆಯಲ್ಲಿದ್ದಾಗ ನೆರವಾಗಬೇಕು. ಸಕಾಲದಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡಬೇಕು. ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕಿವಿಮಾತು ಹೇಳಿದರು.
 ಅವಸರವೇ ಅಪಘಾತಕ್ಕೆ ಕಾರಣ. ಇದನ್ನೆಲ್ಲ ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಸಂಚಾರ ನಿಯಮಗಳ ಬಗ್ಗೆ ಜಾಗೃತರಾಗಬೇಕು. ಮೊದಲು ಆರ್ಥಿಕವಾಗಿ ಸದೃಢರಾಗಿ ನಂತರ ಪ್ರೀತಿ, ಪ್ರೇಮದ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದರು.
 ಸಾರಿಗೆ ಇಲಾಖೆಯ ಹಿರಿಯ ಇನ್‌ಸ್ಪೆಕ್ಟರ್ ಮಹಮ್ಮದ್ ಖಾಲೀದ್ ಮಾತನಾಡಿ, ಸುರಕ್ಷತೆಯು ಮನೆಯಿಂದಲೇ ಆರಂಭವಾಗುತ್ತದೆ. ಸುರಕ್ಷತೆ ಕಾಪಾಡಿಕೊಳ್ಳುವಂತೆ ತಂದೆ, ತಾಯಿ ಹೇಳಿದಾಗ ಅದನ್ನು ಗಂಭೀರವಾಗಿ ಪರಿಣಿಸಿ ಪಾಲಿಸಬೇಕು ಎಂದುಯ ಹೇಳಿದರು.
 ಕುಡಿದು ಚಾಲನೆ ಮಾಡುವುದು, ವೀಲಿಂಗ್, ಹೆಲ್ಮೆಟ್ ಧರಿಸದಿರುವುದು, ಅಜಾಗರೂಕ ಚಾಲನೆ, ತ್ರಿಬಲ್ ರೈಡಿಂಗ್ ಹೀಗೆ ನಿಯಮಗಳ ಉಲ್ಲಂಘನೆಯಾಗುತ್ತವೆ. ಇದರಿಂದ ಅಪಾಯವನ್ನು ಆಹ್ವಾನಿಸಿಕೊಂಡಂತೆ. ಭವಿಷ್ಯದ ಪ್ರಜೆಗಳಾದ ಯುವಕರು ಸುರಕ್ಷಿತ ಜೀವನ ಸಾಗಿಸಿ ತಮ್ಮ ಗುರಿಯನ್ನು ಸಾಧಿಸಬೇಕು ಎಂದು ತಿಳಿಸಿದರು.
 ಇತ್ತೀಚಿನ ದಿನಗಳಲ್ಲಿ ವಾಹನಗಳ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು. ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕ ರಸ್ತೆಗಳ ನಿರ್ಮಾಣ ಇನ್ನಿತರ ವಿಷಯಗಳ ಕುರಿತು ಸಂಶೋಧನೆ ನಡೆಸಬೇಕು ಎಂದು ಹೇಳಿದರು.
 ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರಣ್ಣವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಕಾಲೇಜು ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ, ಸಿವಿಲ್ ವಿಭಾಗದ ಮುಖ್ಯಸ್ಥೆ ಈರಮ್ಮ, ಡಾ.ಸಿ.ಎಂ. ರವಿಕುಮಾರ್ ಇದ್ದರು.