ಜಿಲ್ಲೆ

ಟ್ರಾಫಿಕ್ ಸಿಗ್ನಲ್‌ಗಳು ಇನ್ನು ಸ್ಮಾರ್ಟ್

ರಮೇಶ ಜಹಗೀರದಾರ್ ದಾವಣಗೆರೆ
‘ಸ್ಮಾರ್ಟ್‌ಸಿಟಿ’ ದಾವಣಗೆರೆಯಲ್ಲಿ ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ಗಳು ಬರಲಿವೆ. ಸುಗಮ ಸಂಚಾರಕ್ಕಾಗಿ ಜರ್ಮನ್ ತಂತ್ರಜ್ಞಾನ ಬಳಸಿ, ಮೊದಲನೇ ಹಂತದಲ್ಲಿ 23 ವೃತ್ತಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಸ್ಮಾರ್ಟ್ ಸಿಟಿ ಮತ್ತು ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಇದು ಕಾರ್ಯರೂಪಕ್ಕೆ ಬರುತ್ತಿದೆ. ಐಟಿಐ ಕಾಲೇಜು ವೃತ್ತದಲ್ಲಿ ನೂತನ ಸಿಗ್ನಲ್‌ಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಅದರ ಯಶಸ್ಸು ನೋಡಿಕೊಂಡು ಇತರ ವೃತ್ತಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಇದುವರೆಗೆ 9 ಸರ್ಕಲ್‌ಗಳಲ್ಲಿ ಕಂಬಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕ ಸುರಕ್ಷತೆ, ಸಮಯ ಮತ್ತು ಇಂಧನ ಉಳಿತಾಯದ ಆಶಯದೊಂದಿಗೆ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಟಿಎಂಎಸ್) ಅನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ಜಿಪಿಎಸ್ ನೆರವು ಪಡೆಯಲಾಗುತ್ತ.

ವಾಹನ ಸವಾರ ಒಂದು ಸಿಗ್ನಲ್‌ನಿಂದ ಹೊರಟು ಇನ್ನೊಂದು ಸಿಗ್ನಲ್ ತಲುಪಲು ಇಂತಿಷ್ಟು ಸಮಯ ಎಂದು ಲೆಕ್ಕಾಚಾರ ಮಾಡಲಾಗಿರುತ್ತದೆ. ನಿಗದಿತ ವೇಗದಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋದರೆ ಮುಂದಿನ ವೃತ್ತದಲ್ಲೂ ಗ್ರೀನ್ ಸಿಗ್ನಲ್ ಇರುವಂತೆ ಹೊಂದಾಣಿಕೆ (ಸಿಂಕ್ರನೈಸ್) ಮಾಡಲಾಗಿರುತ್ತದೆ. 40 ಕಿ.ಮೀ. ವೇಗ ಮಿತಿಯಲ್ಲಿ ಹೋದರೆ ಸಿಗ್ನಲ್‌ಗಳಲ್ಲಿ ನಿಲ್ಲುವ ಪ್ರಮೇಯ ಬರುವ ಸಾಧ್ಯತೆ ಕಡಿಮೆ ಎನ್ನುತ್ತವೆ ಪೊಲೀಸ್ ಮೂಲಗಳು.

ನೂತನ ತಂತ್ರಜ್ಞಾನದಲ್ಲಿ ರಾಡಾರ್ ಅಳವಡಿಸಲಾಗಿದ್ದು, ವಾಹನ ದಟ್ಟಣೆಯ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ. ಶಾಲಾ ಕಾಲೇಜುಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಪೀಕ್ ಅವರ್‌ನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಇನ್ನಿತರ ಪಾದಚಾರಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ.

ಯಾವ ಸರ್ಕಲ್‌ಗಳಲ್ಲಿ?: ಸಂಗೊಳ್ಳಿ ರಾಯಣ್ಣ ಸರ್ಕಲ್, ಕೋರ್ಟ್ ಸರ್ಕಲ್, ಅರುಣಾ ಸರ್ಕಲ್, ರೈಲು ನಿಲ್ದಾಣ, ದೇವರಾಜ ಅರಸು ವೃತ್ತ (ಹಳೆ ಬಸ್ ನಿಲ್ದಾಣ ಬಳಿ), ಗಾಂಧಿ ಸರ್ಕಲ್, ಈರುಳ್ಳಿ ಮಾರ್ಕೆಟ್ ಹತ್ತಿರ, ಗಣೇಶ ಹೋಟೆಲ್ ಬಳಿ, ಜಯದೇವ ವೃತ್ತ, ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿಭವನ, ಗ್ರಾಮಾಂತರ ಠಾಣೆ ಸಮೀಪ, ಐಟಿಐ ಕಾಲೇಜ್, ವಿದ್ಯಾನಗರದ ಗಾಂಧಿ ವೃತ್ತ, ಶಾಮನೂರು ರಸ್ತೆಯ ಬಾಪೂಜಿ ಸಮುದಾಯ ಭವನ, ಶಾರದಾಂಬಾ ಸರ್ಕಲ್, ಡಿಸಿ ಸರ್ಕಲ್, ಆರ್‌ಟಿಒ ಆಫೀಸ್ ಸರ್ಕಲ್, ಅರಳಿಮರ ಸರ್ಕಲ್, ಬೂದಾಳ ಸರ್ಕಲ್, ಅಖ್ತರ್ ರಜಾ ಸರ್ಕಲ್, ವೆಂಕಟೇಶ್ವರ ಸರ್ಕಲ್.

ಹೊಸ ವಿನ್ಯಾಸದ ಸಿಗ್ನಲ್‌ಗಳು: ಸಾರ್ವಜನಿಕರಿಗೆ ಸಿಗ್ನಲ್‌ಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸುವಂತೆ ವಿನ್ಯಾಸ ಮಾಡಲಾಗಿದೆ. 7.5 ಮೀಟರ್ ಎತ್ತರದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಲಾಗುತ್ತಿದೆ. ಗ್ರೀನ್ ಸಿಗ್ನಲ್ ಇದ್ದಾಗ ಸಂಖ್ಯೆಗಳೂ ಹಸಿರು ಬಣ್ಣದವೇ ಇರುತ್ತವೆ. ಸಿಗ್ನಲ್ ರೆಡ್ ಇದ್ದಾಗ ಸಂಖ್ಯೆಗಳು ಕೆಂಪು ಬಣ್ಣದಿಂದ ಕೂಡಿರುತ್ತವೆ. 150 ಮೀಟರ್‌ವರೆಗೂ ಡಿಜಿಟ್‌ಗಳು ಕಾಣಿಸುತ್ತವೆ. ಅಂಧ ಪಾದಚಾರಿಗಳ ಅನುಕೂಲಕ್ಕಾಗಿ ‘ಹೂಟರ್’ ಉಪಕರಣ ಅಳವಡಿಸಲಾಗಿದ್ದು, ಅದು ಶಬ್ದ ಮಾಡುವ ಮೂಲಕ ಸೂಚನೆ ನೀಡುತ್ತದೆ.

23 ಜಂಕ್ಷನ್‌ಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು 3 ತಿಂಗಳೊಳಗೆ ಮುಗಿಸುವ ಉದ್ದೇಶವಿದೆ. ಇದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ.
> ರವೀಂದ್ರ ಮಲ್ಲಾಪುರ, ಸ್ಮಾರ್ಟ್‌ಸಿಟಿ ಎಂಡಿ