ಜಿಲ್ಲೆ

ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ದೆಹಲಿ ಶೈಕ್ಷಣಿಕ ಪ್ರವಾಸ

ದಾವಣಗೆರೆ :  ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ ಒಬ್ಬರಂತೆ ಹಾಗೂ ವಿಶೇಷ ಪ್ರಕರಣದಡಿ ಒಟ್ಟಾರೆ ಎಸ್.ಎಸ್.ಎಲ್.ಸಿ. ಟಾಪರ್ ಆಗಿರುವ 9 ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಐದು ದಿನಗಳ ದೆಹಲಿ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದಾರೆ.  ಮುಂದಿನ ದಿನಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಲಿ ಎಂಬ ಆಶಯದಿಂದ ಆಯೋಜಿಸಿರುವ ಈ ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳನ್ನು ಡಾ. ಪ್ರಭಾ ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಅವರ ಅನಿಸಿಕೆಗಳನ್ನು ಆಲಿಸಿದರು.  ವಿದ್ಯಾರ್ಥಿಗಳು ಇಂಡಿಯಾ ಗೇಟ್, ಕಮಲ ಮಂದಿರ, ಕುತುಬ್ ಮಿನಾರ್, ಕೆಂಪುಕೋಟೆ, ಕರ್ತವ್ಯ ಪಥ ಮತ್ತು ಸ್ವಾಮಿನಾರಾಯಣ ಮಂದಿರ ಮುಂತಾದ ಪ್ರಮುಖ ಸ್ಮಾರಕ, ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಶಿಕ್ಷಕರೂ ತೆರಳಲಿದ್ದಾರೆ. ಅ. 27ರಿಂದ 31 ರವರೆಗೆ ಒಟ್ಟು 5 ದಿನಗಳ ಕಾಲ ಪ್ರವಾಸ ಇರಲಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಪೂರ್ಣ ವೆಚ್ಚವನ್ನು ಸಂಸದರೇ ಭರಿಸಲಿದ್ದಾರೆ.  ಈ ಸಂದರ್ಭದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಈ ಶೈಕ್ಷಣಿಕ ಪ್ರವಾಸದ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆ ಬೆಳೆಸುವುದಾಗಿದೆ ಎಂದರು.  ವಿದ್ಯಾರ್ಥಿಗಳಾದ ಪಿ. ಮಂಜುನಾಥ್, ಧನುಷ್ ಬಿ.ಎನ್, ಪವನ್ ಕುಮಾರ್ ಕೆ.ಪಿ, ಜೇಷ್ಠಾ ಬಿ., ಅಮೃತಾ ಟಿ.ಎಂ., ಮಿಜ್ಬಾನಾಜ್, ಉಷಾ ಎಚ್., ಲತಾ ಎಚ್.ಎ. ಮತ್ತು ಯೋಗೇಶ್ವರಿ ಜೆ.ಬಿ ಅವರೊಂದಿಗೆ ಶಿಕ್ಷಕರಾದ ಬಿ. ಅರುಣ್ ಕುಮಾರ್ ಮತ್ತು ಕೆ.ಎಂ. ನಿಂಗಮ್ಮ ತೆರಳಲಿದ್ದಾರೆ.