ಜಿಲ್ಲೆ

ತೆರೆದ ಮಾರುಕಟ್ಟೆಯಲ್ಲಿ ತಂಬಾಕು ಉತ್ಪನ್ನ ಮಾರುವಂತಿಲ್ಲ

ರಮೇಶ ಜಹಗೀರದಾರ್

ಸಾಸ್ವೆಹಳ್ಳಿ : ತಂಬಾಕು ನಿಯಂತ್ರಣ ಅಧಿನಿಯಮ ಕಾಯ್ದೆ ಅಡಿ ಸಾರ್ವಜನಿಕ ಸ್ಥಳಗಳಲ್ಲಿ ತೆರೆದ ಮಾರುಕಟ್ಟೆಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ, ಬೀಡಿ-ಸಿಗರೇಟ್ ಸೇದುವಂತಿಲ್ಲ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ ಸತೀಶ್ ಕಲಹಾಲ್ ಹೇಳಿದರು.  ಸಾರ್ವಜನಿಕ ಸ್ಥಳಗಳಲ್ಲಿರುವ ಅಂಗಡಿ ಮತ್ತು ಹೋಟೆಲ್‌ಗಳಿಗೆ ಗುರುವಾರ ಕೋಶಭೇಟಿ ನೀಡಿ, ಮಾಲೀಕರಿಗೆ ಮತ್ತು ಮಾರಾಟಗಾರರಿಗೆ ತಂಬಾಕು ಉತ್ಪನ್ನಗಳಿಂದ ಆಗುವ ಹಾನಿ ಮತ್ತು ಮಾರಾಟ ವಿಧಾನದ ಬಗ್ಗೆ ಜಾಗೃತಿ ಮೂಡಿಸಿದರು.  ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ  ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಾರುಕಟ್ಟೆಯಲ್ಲಿ ಇರುವ  ತಂಬಾಕು ಉತ್ಪನ್ನಗಳ ಮೇಲೆ ಬಳಕೆಯಿಂದಾಗುವ ಹಾನಿ ಸೂಚಿಸುವ ಚಿತ್ರ ಮತ್ತು ಮಾಹಿತಿ ಮುದ್ರಣವಾಗಿದ್ದರೆ ಅಂತಹ ಉತ್ಪನ್ನಗಳನ್ನು ಮಾತ್ರ ಮುಕ್ತ್ತವಾಗಿ ಮಾರಾಟ ಮಾಡಲು ಅವಕಾಶವಿರುತ್ತದೆ ಎಂದರು.  ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿ, ಹೋಟೆಲ್ ಮಾಲೀಕರಿಗೆ ದಂಡ ವಿಧಿಸಲಾಯಿತು.  ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ  ಹೆಲ್ತ್ ಇನ್‌ಸ್ಪೆಕ್ಟರ್ ನಾಗರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಂಗಾಪುರ, ಸಾಸ್ವೆಹಳ್ಳಿ ಕ್ಲಸ್ಟರ್ ಸಿಆರ್‌ಪಿಗಳಾದ ಎಚ್. ರಾಜು, ಎಚ್.ಬಿ. ಕಾಳಾಚಾರ್, ಸಾಸ್ವೆಹಳ್ಳಿ ಉಪ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪ್ರಶಾಂತ್, ಸಮಾಜ ಸೇವಕಿ ಶಾಮನೂರು ಶೈಲಾ ಇದ್ದರು.