ಜಿಲ್ಲೆ

ಟೆಂಟ್‌ಮುಕ್ತ ಕರ್ನಾಟಕ’ ಮಾಡುವ ಕನಸು

ದಸಾವಣಗೆರೆ : ‘ಟೆಂಟ್‌ಮುಕ್ತ ಕರ್ನಾಟಕ’ ಮಾಡುವ ಕನಸು   ಎಸ್ಸಿ ಎಸ್ಟಿ ಅಲೆಮಾರಿಗಳಿಗೆ ಸೂರು  ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹೇಳಿಕೆ  ವಿಜಯವಾಣಿ ಸುದ್ದಿಜಾಲ ದಾವಣಗೆರೆ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿಗಳು ವಸತಿ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಸೂರು ಕಲ್ಪಿಸುವ ಮೂಲಕ ‘ಟೆಂಟ್‌ಮುಕ್ತ ಕರ್ನಾಟಕ’ ಮಾಡಬೇಕೆಂಬ ಕನಸಿದೆ ಎಂದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹೇಳಿದರು.  ಎಲ್ಲ ಜಿಲ್ಲೆಗಳ ಪ್ರವಾಸ ಮುಗಿದ ನಂತರ ಸಮಗ್ರ ವರದಿ ಸಿದ್ಧಪಡಿಸಿ, ನಿರಾಶ್ರಿತರನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 6.65 ಲಕ್ಷ, ಪರಿಶಿಷ್ಟ ಪಂಗಡದ 3.21 ಲಕ್ಷ ಜನರು ಮತ್ತು ಆದಿವಾಸಿ ಸಮುದಾಯದ 1.22 ಲಕ್ಷ ಅಲೆಮಾರಿಗಳಿದ್ದಾರೆ. ಅವರ ಕುಂದುಕೊರತೆಗಳನ್ನು ಅಧಿಕಾರಿಗಳು ಆಲಿಸಿ, ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಿ ಸೌಲಭ್ಯ ತಲುಪಿಸಬೇಕು ಎಂದು ಹೇಳಿದರು.  ಜಿಲ್ಲೆಯ ಸವಳಂಗ ಗ್ರಾಮದಲ್ಲಿ ಶಿಳ್ಳೆಕ್ಯಾತ, ಕೊರಚ ಸಮುದಾಯದ ಕುಟುಂಬಗಳು ವಾಸವಾಗಿದ್ದು ಅವರಿಗೆ ನಿವೇಶನ ಇಲ್ಲ. ಸ್ಮಶಾನ ಭೂಮಿ ಲಭ್ಯತೆ ಇಲ್ಲ. ಹೊನ್ನಾಳಿ ಪಟ್ಟಣದ ಮೇದಾರ ಕಾಲನಿಯಲ್ಲಿ ಅಲೆಮಾರಿಗಳ 60 ಕುಟುಂಬಗಳಿವೆ.  ಸಾಸ್ವೆಹಳ್ಳಿಯಲ್ಲಿ ಚನ್ನದಾಸರ ಸಮುದಾಯದ ಕುಟುಂಬಗಳಿಗೆ ನೆಮ್ಮದಿಯ ನೆಲೆ ಇಲ್ಲ. ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಅದನ್ನು ತಡೆಯಲು ತಡೆಗೋಡೆ ನಿರ್ಮಿಸಬೇಕು ಎಂಬುದು ಅಲ್ಲಿನ ನಿವಾಸಿಗಳ ಬೇಡಿಕೆಯಾಗಿದೆ. ಚನ್ನಗಿರಿ ತಾಲೂಕಿನಲ್ಲಿರುವ ಹಕ್ಕಿಪಿಕ್ಕಿ ಜನಾಂಗದವರ ಅಹವಾಲುಗಳನ್ನೂ ಆಲಿಸಿರುವುದಾಗಿ ತಿಳಿಸಿದರು.  ಸಂತೇಬೆನ್ನೂರಿನಲ್ಲಿ ಕೊರಚ ಸಮುದಾಯದ 90 ಕುಟುಂಬಗಳಿವೆ. ಅಲ್ಲಿನ ಶಾಲೆಗೆ ಡೈನಿಂಗ್ ಹಾಲ್ ಬೇಕೆಂಬ ಬೇಡಿಕೆಯಿದೆ. ಹರಿಹರದ ಭರಮಪುರದ 20 ಕುಟುಂಬಗಳಿಗೆ ನಿವೇಶನ ಇಲ್ಲ. ಗುತ್ತೂರಿನ ಬುಡ್ಗ ಜಂಗಮ ಜನಾಂಗ, ಬೆಳ್ಳೂಡಿಯ ರಾಜಗೊಂಡ ಸಮುದಾಯಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಅರಿವು ಮೂಡಿಸಬೇಕು ಎಂದು ಹೇಳಿದರು.  ವಸತಿ ಶಾಲೆಗಳಲ್ಲಿ ಅಲೆಮಾರಿ ವಿದ್ಯಾರ್ಥಿಗಳಿಗೆ ಶೇ. 10 ರಷ್ಟು ಮೀಸಲಿರಿಸಿ ಪ್ರವೇಶ ಕಲ್ಪಿಸಲು ಆದೇಶವಿದೆ. ಜನರಿಗೆ ಮಾಹಿತಿ ಕೊರತೆಯ ಕಾರಣ, ಜಿಲ್ಲೆಯಲ್ಲಿ 110 ವಿದ್ಯಾರ್ಥಿಗಳಿಗೆ ಅವಕಾಶವಿದ್ದರೂ 40 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದರು.  ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್. ಆನಂದ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಡಿಯುಡಿಸಿ ಯೋಜನಾ ನಿರ್ದೇಶಕ ಡಾ. ಮಹಾಂತೇಶ್ ಸುದ್ದಿಗೋಷ್ಠಿಯಲ್ಲಿದ್ದರು..