ದಾವಣಗೆರೆ : ಬೆಣ್ಣೆನಗರಿ ದಾವಣಗೆರೆಯಲ್ಲಿ ಅಕ್ಟೋಬರ್ 22ರಿಂದ 29ರ ವರೆಗೆ ಎಂಟು ದಿನಗಳ ಕಾಲ ಪುರುಷರ ವಿಭಾಗದ ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಕಳೆಗಟ್ಟಲಿದೆ.
ದಾವಣಗೆರೆ, ಮೂರನೇ ಬಾರಿ ಅಂತಾರಾಷ್ಟ್ರೀಯ ಮಟ್ಟದ ಟೆನ್ನಿಸ್ ಟೂರ್ನಿಯ ಆತಿಥ್ಯ ವಹಿಸಿದ್ದು ಭಾರತ ಸೇರಿ 16-19 ರಾಷ್ಟ್ರಗಳ 72ಕ್ಕೂ ಅಧಿಕ ಅಗ್ರ ಶ್ರೇಯಾಂಕಿತ ಆಟಗಾರರು ಭಾಗವಹಿಸುವರು.
ಪಂದ್ಯಾವಳಿಗೆ ಜಿಲ್ಲಾ ಟೆನ್ನಿಸ್ ಕ್ರೀಡಾಂಗಣ ಸಂಪೂರ್ಣ ಸಜ್ಜಾಗುತ್ತಿದೆ.ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭಾರತ, ಅಮೆರಿಕ, ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಆಸ್ಟ್ರೇಲಿಯಾ, ಇಟಲಿ, ಪ್ರಾನ್ಸ್ ಸೇರಿ ಇತರ ರಾಷ್ಟ್ರಗಳ ಕ್ರೀಡಾಪಟುಗಳು ಆಟದ ಅಂಕಣಕ್ಕಿಳಿಯಲಿದ್ದಾರೆ.
ಅ.22 ಮತ್ತು 23 ರಂದು ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ 32 ಕ್ರೀಡಾಪಟುಗಳು ಸೆಣಸಲಿದ್ದಾರೆ. ಇಲ್ಲಿ ವಿಜೇತರಾದ 8 ಆಟಗಾರರನ್ನು ಮುಖ್ಯ ಪಂದ್ಯಾವಳಿಗೆ ಪರಿಗಣಿಸಲಾಗುತ್ತದೆ.
ಮುಖ್ಯ ಟೂರ್ನಿಯಲ್ಲಿ ನೇರವಾಗಿ 20 ಸ್ಪರ್ಧಿಗಳು ಹಾಗೂ ಅರ್ಹತಾ ಸುತ್ತಿನ 8 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ 15 ಲಕ್ಷ ರೂ. ಬಹುಮಾನ ಮೊತ್ತವಿದೆ ಎಂದು ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಟೂರ್ನಿ ಏರ್ಪಡಿಸಲಾಗಿದೆ. ಪಂದ್ಯಾವಳಿಯಿಂದ ಜಿಲ್ಲೆಯ ಅಭಿವೃದ್ಧಿ, ಸಾಧನೆಗಳು ಕೂಡ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಲಿವೆ ಎಂದರು.
ಅ.24ರ ಬೆಳಗ್ಗೆ 9 ಗಂಟೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪಂದ್ಯಾವಳಿ ಉದ್ಘಾಟಿಸುವರು. ನಿವೃತ್ತ ಏರ್ ಮಾರ್ಷಲ್ ಎಚ್.ಬಿ. ರಾಜಾರಾಂ ಅತಿಥಿಯಾಗಿ ಭಾಗವಹಿಸಲಿದ್ದು, ಚೀನಾದ ಏಷಿಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ರಾಮಕುಮಾರ ರಾಮನಾಥನ್ ಹಾಗೂ ಡೇವಿಸ್ ಕಪ್ ಆಟಗಾರ ಪ್ರತಾಪ್‌ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಸ್ಪಿ ಉಮಾ ಪ್ರಶಾಂತ್, ಎಸಿ ದುರ್ಗಾಶ್ರೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮಿಬಾಯಿ, ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಶ್ರೀಶೈಲ ಬ್ಯಾಡಗಿ, ಕಾರ್ಯದರ್ಶಿ ಕೆ.ಪಿ. ಚಂದ್ರಪ್ಪ, ಮಂಜುನಾಥ್, ರಘುನಾಥ್, ನಿಂಗಪ್ಪ, ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.