ಜಿಲ್ಲೆ

8 ರಂದು ಪುರಿ ಶ್ರೀ ಜಗನ್ನಾಥ ರಥಯಾತ್ರೆ

ರಮೇಶ ಜಹಗೀರದಾರ್

ದಾವಣಗೆರೆ :  ಇಸ್ಕಾನ್ ಸಂಸ್ಥೆಯ ವತಿಯಿಂದ ಪುರಿ ಶ್ರೀ ಜಗನ್ನಾಥ ರಥಯಾತ್ರೆ ಜುಲೈ 8 ರಂದು ನಗರದಲ್ಲಿ 3ನೇ ಬಾರಿಗೆ ನಡೆಯಲಿದೆ ಎಂದು ಸಂಸ್ಥೆಯ ದಾವಣಗೆರೆ ಘಟಕದ ಮುಖ್ಯಸ್ಥರಾದ ಅವಧೂತ ಚಂದ್ರ ದಾಸ ಹೇಳಿದರು.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಹಾ ಮಂಗಳಾರತಿಯ ನಂತರ ಮಧ್ಯಾಹ್ನ 2 ಗಂಟೆಗೆ ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದ ಬಳಿ ರಥಯಾತ್ರೆಯನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು ಎಂದು ತಿಳಿಸಿದರು.  ರಥಯಾತ್ರೆಯು ಚಾಮರಾಜಪೇಟೆ ವೃತ್ತ, ಹಾಸಭಾವಿ ವೃತ್ತ, ಚೌಕಿಪೇಟೆ, ಹೊಂಡದ ಸರ್ಕಲ್, ಅರುಣ ಸರ್ಕಲ್, ಆರ್.ಎಚ್. ಛತ್ರ, ಜಯದೇವ ವೃತ್ತ, ವಿದ್ಯಾರ್ಥಿ ಭವನ ಮಾರ್ಗವಾಗಿ ಗುಂಡಿ ವೃತ್ತ ತಲುಪುವುದು ಎಂದು ಹೇಳಿದರು.  ಸಂಜೆ 5 ಗಂಟೆಗೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀ ಜಗನ್ನಾಥ ಮಹಾ ಮಂಗಳಾರತಿ, ನೃತ್ಯ, ನಾಟಕ, ಗುರುಗಳಿಂದ ಆಶೀರ್ವಚನ ನಂತರ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.  ರಥಯಾತ್ರೆ ಸಾಗುವ ಮಾರ್ಗವು 5 ಕಿ.ಮೀ.ಗಳಷ್ಟಿದೆ. ಮಾರ್ಗದುದ್ದಕ್ಕೂ ರಂಗೋಲಿ ಹಾಕಿ ಅಲಂಕಾರ ಮಾಡಲಾಗುತ್ತದೆ. ಕಲಾ ತಂಡಗಳು ಭಾಗವಹಿಸಲಿವೆ, ಭಕ್ತರು ಕೂರ್ತನೆಗಳನ್ನು ಹಾಡಲಿದ್ದಾರೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.  ಶ್ರೀ ಜಗನ್ನಾಥ ರಥಯಾತ್ರೆಯು ಒಂದು ಕಾಲಕ್ಕೆ ಪುರಿ ಹಾಗೂ ಇನ್ನಿತರ ಕೆಲವೇ ನಗರಗಳಿಗೆ ಸೀಮಿತವಾಗಿತ್ತು. ಅಮೆರಿಕದ ನ್ಯೂಯಾರ್ಕ್‌ನಲ್ಲೂ ಅನೇಕ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು ವಿಶ್ವ ವಿಖ್ಯಾತವಾಗಿದೆ ಎಂದು ಹೇಳಿದರು.  ರಥದಲ್ಲಿ ಸ್ವಾಮಿಯ ದರ್ಶನ ಮಾಡಿದರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಎಲ್ಲರಿಗೂ ಭಗವಂತನ ಅನುಗ್ರಹವಾಗಲಿ ಎಂಬ ಆಶಯದೊಂದಿಗೆ ರಥಯಾತ್ರೆ ನಡೆಯಲಿದೆ. ಅದ್ದೂರಿಯಾಗಿ ನಡೆಯುವ ಈ ಉತ್ಸವದಲ್ಲಿ ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.  ಸಮಾಜ ಸೇವಕರಾದ ಕೆ.ಬಿ. ಶಂಕರ ನಾರಾಯಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರಿಗೆ ಭಗವಂತನ ಮೇಲೆ ಭಕ್ತಿ ಕಡಿಮೆಯಾಗುತ್ತಿದೆ. ಹಿಂದು ಸಂಸ್ಕೃತಿಯನ್ನು ಉಳಿಸಲು ಧಾರ್ಮಿಕ ಜಾಗೃತಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.  ಪಾಲಿಕೆಯ ಪ್ರತಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ರಥಯಾತ್ರಾ ಉತ್ಸವ ಸಮಿತಿಯ ಉಪಾಧ್ಯಕ್ಷ ನಲ್ಲೂರು ರಾಜಕುಮಾರ್, ಕಾರ್ಯದರ್ಶಿ ಕಾಸಲ್ ವಿ. ಬದ್ರಿನಾಥ್, ಸ್ಫೂರ್ತಿ ಸೇವಾ ಟ್ರಸ್ಟ್‌ನ ಬಿ. ಸತ್ಯನಾರಾಯಣ ಮೂರ್ತಿ, ಕಾಸಲ್ ಅಮರನಾಥ್ ಇದ್ದರು.  ...  (ಬಾಕ್ಸ್)  ನೂತನ ರಥ ಸಿದ್ಧ  ಭಕ್ತರ ಸಹಕಾರದಿಂದ 11 ಲಕ್ಷ ರೂ. ವೆಚ್ಚದಲ್ಲಿ ನೂತನ ರಥ ನಿರ್ಮಾಣವಾಗಿದೆ ಎಂದು ಅವಧೂತ ಚಂದ್ರ ದಾಸ ಹೇಳಿದರು.  ನಗರದಲ್ಲಿ ಇಸ್ಕಾನ್ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶವಿದೆ. ಅದಕ್ಕಾಗಿ ಜಾಗದ ಅನ್ವೇಷಣೆ ನಡೆಯುತ್ತಿದೆ. ಸಿಎ ನಿವೇಶನ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಸ್ಥಳೀಯ ದಾನಿಗಳ ಸಹಾಯದಿಂದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶವಿದೆ ಎಂದು ತಿಳಿಸಿದರು.  ...