ದಾವಣಗೆರೆ : ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರಿದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಬಡತನ ನಿವಾರಣೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ವಿದ್ಯೆ ಕೊಡಿಸಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಕಿವಿಮಾತು ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಒಂಟಿಹಾಳ್ ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯ ಸ್ವಾಮಿ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, ಗೋಪುರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗರಾಬಾರದು. ವಾಲ್ಮೀಕಿ ಗುರುಪೀಠದಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ನಿಮ್ಮ ಮಕ್ಕಳನ್ನು ಗುರುಗಳ ಮಡಿಲಿಗೆ ಹಾಕಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಸಮಾಜದ ಬಗ್ಗೆ ಕಳಕಳಿ ಹೊಂದಿರುವ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಮೀಸಲಾತಿಯಿಂದ ವಂಚಿತರಾದ ಮಕ್ಕಳಿಗೆ ಆ ಸೌಲಭ್ಯ ಸಿಗಬೇಕೆಂದು ಬೆಂಗಳೂರಿಗೆ ಪಾದಯಾತ್ರೆ ಮಾಡಿ ಮಳೆ, ಚಳಿ, ಬಿಸಿಲು ಎನ್ನದೆ ಸುದೀರ್ಘ 258 ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡಿ ಸರ್ಕಾರವನ್ನೇ ಅವರ ಬಳಿ ಕರೆಸಿಕೊಂಡು ಹೋರಾಟದಲ್ಲಿ ಯಶಸ್ವಿಯಾದರು ಎಂದು ನೆನಪಿಸಿದರು.
ಮುಂದಿನ ದಿನಗಳಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ತರುವ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಈಗಾಗಲೇ ಒಂಟಿಹಾಳ್, ಮಾಯಕೊಂಡ ಮತ್ತು ದಿಂಡದಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗುತ್ತಿದೆ. ಒಂಟಿಹಾಳ್ ಮತ್ತು ಹಿಟ್ಲಾಪುರಕ್ಕೆ ವಾಲ್ಮೀಕಿ ಭವನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಶ್ರೀರಾಮನ ಚರಿತ್ರೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಆದಿಕವಿ ಮಹರ್ಷಿ ವಾಲ್ಮೀಕಿ. ಅಂತಹ ವಾಲ್ಮೀಕಿ ಕುಲದಲ್ಲಿ ಹುಟ್ಟಿದ ನಾವು ಅವರಂತೆಯೇ ಆದರ್ಶ ಪುರುಷರಾಗಿ ಬಾಳಿ ಜಗತ್ತಿಗೆ ಬೆಳಕಾಗಬೇಕು ಎಂದು ನುಡಿದರು.
ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಇದರ ಪರಿಣಾಮ ಅತಿವೃಷ್ಟಿ ಮತ್ತು ಅನಾವೃಷ್ಟಿಯಾಗಿ ಮಳೆ, ಬೆಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಸಕಾಲಕ್ಕೆ ಮಳೆ, ಬೆಳೆ ಕೊಡುವಂತೆ ಪ್ರಾರ್ಥನೆ ಸಲ್ಲಿಸಬೇಕಾಗಿದೆ ಎಂದರು.
ಮುಖಂಡರಾದ ಹನುಮಂತಪ್ಪ ಐಗೂರು, ರುದ್ರಸ್ವಾಮಿ, ಒಂಟಿಹಾಳ್ ಶಿವಣ್ಣ, ಮಹಾರುದ್ರಣ್ಣ, ಗೌರಮ್ಮ ಇದ್ದರು.